×
Ad

ಮಂಗಳೂರು| ಮಕ್ಕಳ ಕಳ್ಳಸಾಗಾಟ ಪ್ರಕರಣ: ಮೂವರು ಆರೋಪಿಗಳಿಗೆ ಶಿಕ್ಷೆ ಘೋಷಣೆ

Update: 2025-06-26 19:09 IST

ಮಂಗಳೂರು, ಜೂ.26: ಸುಮಾರು 12 ವರ್ಷದ ಹಿಂದೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಕ್ಕಳ ಕಳ್ಳ ಸಾಗಾಟ ಪ್ರಕರಣದ ಮೂವರು ಆರೋಪಿಗಳಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಗುರುವಾರ ಶಿಕ್ಷೆ ಘೋಷಿಸಿದೆ. ಶಿಕ್ಷೆಯ ಪ್ರಮಾಣವನ್ನು ಸೋಮವಾರ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿದೆ.

ಲೆನೆಟ್ ವೇಗಸ್, ಜೊಸ್ಸಿ ವೇಗಸ್, ಲಸ್ಸಿ ವೇಗಸ್ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ.

ಘಟನೆಯ ವಿವರ: 2013ರಲ್ಲಿ ಅಂಗನವಾಡಿ ಕಾರ್ಯಕರ್ತೆ ಫಾತಿಮಾ ಎಂಬಾಕೆ ಮನೆ ಮನೆಗೆ ತೆರಳಿ ಮಕ್ಕಳ ಸಮೀಕ್ಷೆ ಮಾಡುವ ಸಂದರ್ಭ ಲೆನೆಟ್ ವೇಗಸ್‌ರ ಎಂಬವರ ಮನೆಯಲ್ಲಿ ಮಾರಾಟಕ್ಕೆ ಮಗು ವನ್ನು ಇಟ್ಟಿರುವ ಬಗ್ಗೆ ಮಾಹಿತಿ ಪಡೆದು ಪತ್ರಕರ್ತ ನವೀನ್ ಸೂರಿಂಜೆಯ ಗಮನಕ್ಕೆ ತಂದಿದ್ದರು. ನಂತರ ಚೈಲ್ಡ್‌ಲೈನ್ ಸಂಸ್ಥೆಯವರು ಲೆನೆಟ್ ಮನೆಗೆ ತೆರಳಿ ಮಗುವಿನ ಕುರಿತು ವಿಚಾರಿಸಿದಾಗ ಮಗು ತನ್ನದೇ ಎಂದು ಲೆನೆಟ್ ಪ್ರತಿಪಾದಿಸಿದ್ದರಲ್ಲದೆ, ಆ ಮಗುವನ್ನು ತಾನೇ ಹೆತ್ತಿದ್ದು ಎಂಬುದಕ್ಕೆ ಮಂಗಳೂರಿನ ನರ್ಸಿಂಗ್ ಹೋಂ ಒಂದರ ಡಿಸ್ಚಾರ್ಜ್ ದಾಖಲೆಗಳನ್ನೂ ತೋರಿಸಿದ್ದಳು.

ರಾತ್ರಿ-ಹಗಲು ಕಾರ್ಯಾಚರಣೆ ಮಾಡಿ ಮಗುವಿನ ನಿಜ ತಾಯಿಯನ್ನು ಪತ್ತೆ ಹಚ್ಚಲಾಯಿತು. ಆ ಮಗು ಉತ್ತರ ಕರ್ನಾಟಕದ ಚೆನ್ನವ್ವ ಎಂಬವರದ್ದಾಗಿತ್ತು. ಕಟ್ಟಡದ ಕೆಲಸಕ್ಕೆ ಬಂದಿದ್ದ ಚೆನ್ನವ್ವ ಬಡತನದ ಬೇಗೆ ತಡೆಯಲಾರದೆ ಮಗುವನ್ನು ಸುಮಾರು 20 ಸಾವಿರಕ್ಕೆ ಲೆನೆಟ್‌ಗೆ ಮಾರಾಟ ಮಾಡುತ್ತಾಳೆ.

ಆ ಬಳಿಕ ಪತ್ರಕರ್ತ ನವೀನ ಸೂರಿಂಜೆ, ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್, ಚೈಲ್ಡ್ ಲೈನ್‌ನ ರೆನ್ನಿ ಡಿಸೋಜ, ಅಸುಂತ ಡಿಸೋಜ, ಅಂಗನವಾಡಿ ಕಾರ್ಯಕರ್ತೆ ಫಾತಿಮಾ ಅಂದಿನ ಪೊಲೀಸ್ ಕಮಿಷನರ್‌ರನ್ನು ಭೇಟಿಯಾಗಿ ಮಕ್ಕಳ ಕಳ್ಳ ಸಾಗಾಟ ಜಾಲದ ಬಗ್ಗೆ ಮಾಹಿತಿ ನೀಡಿದರು.

ಪೊಲೀಸ್ ಕಮಿಷನರ್‌ರ ಸಹಕಾರದ ಮೇರೆಗೆ ದುಬೈಯಲ್ಲಿರುವ ಮುಸ್ಲಿಂ ದಂಪತಿಗೆ ಮಗು ಬೇಕಾಗಿದೆ ಎಂದು ಲೆನೆಟ್ ತಿಳಿಸಿದ್ದು, ಅದರಂತೆ ತೊಕ್ಕೊಟ್ಟಿನ ವೈದ್ಯರೊಬ್ಬರ ಕ್ಲಿನಿಕ್‌ಗೆ ಮಗುವಿನ ಆರೋಗ್ಯ ತಪಾಸಣೆಗೆ ಬರಲಿಕ್ಕಿದೆ. ಮಗುವಿನ ಹೆಲ್ತ್ ಚೆಕಪ್ ಮಾಡಿ ಮಗುವನ್ನು ಮಾರಾಟ ಮಾಡುತ್ತೇನೆ. ಅಲ್ಲೇ ಹಣ ಕೊಟ್ಟು ಮಗು ಖರೀದಿಸಿ ಎಂದು ಲೆನೆಟ್ ಹೇಳಿದ ಮೇರೆಗೆ ಕ್ಲಿನಿಕ್‌ನಿಂದಲೇ ಮಗುವನ್ನು ಖರೀದಿಸುವ ಬಗ್ಗೆ ಕಾರ್ಯಾಚರಣೆ ನಡೆಸಲಾಯಿತು. ಕಮಿಷನ್ ಸೂಚನಯೆ ಮೇರೆಗೆ ಪೊಲೀಸ್ ಕಾನ್‌ಸ್ಟೇಬಲ್ ಇರ್ಫಾನ್ ಕೂಡ ಕಾರ್ಯಾಚರಣೆಯ ಭಾಗವಾಗಿದ್ದರು. ಕೊನೆಗೆ 90 ಸಾ.ರೂ.ವನ್ನು ಕೊಟ್ಟು ಮಗುವನ್ನು ಪಡೆದುಕೊಳ್ಳುವಷ್ಟರಲ್ಲಿ ಲೆನೆಟ್‌ ಳನ್ನು ಅಲ್ಲೇ ಇದ್ದ ಪೊಲೀಸರು ಬಂಧಿಸಿ ಆಕೆಯ ಬಳಿ ಇದ್ದ ಎಲ್ಲಾ ನಕಲಿ ಸರ್ಟಿಫಿಕೇಟ್‌ಗಳು, ಎಟಿಎಂ ಕಾರ್ಡ್‌ಗಳು, ದೆಹಲಿ ವಿಳಾಸದ ನಕಲಿ ವಿಸಿಟಿಂಗ್ ಕಾರ್ಡ್‌ಗಳು, ಮಗುವಿನ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಯಿತು. ಚೆನ್ನವ್ವಳನ್ನು ಪತ್ತೆ ಹಚ್ಚಿ ಆಕೆಯದ್ದೇ ಮಗುವೆಂದು ದಾಖಲೆಗಳ ಸಹಿತ ನಿರೂಪಿಸಿ ಎಫ್‌ಐಆರ್ ದಾಖಲಿಸಲಾಗಿತ್ತು. ಲೆನೆಟ್‌ಗೆ ಸಹಕರಿಸಿದ ಜೊಸ್ಸಿ ವೇಗಸ್, ಲಸ್ಸಿ ವೇಗಸ್ ಮೇಲೂ ಕ್ರಮ ಕೈಗೊಳ್ಳಲಾಯಿತು ಎಂದು ತಿಳಿದುಬಂದಿದೆ.

2013ರಲ್ಲಿ ನಡೆದ ಈ ಪ್ರಕರಣದ ಶಿಕ್ಷೆಯ ತೀರ್ಪು ಗುರುವಾರ ಹೊರಬಿದ್ದಿದ್ದು, ಸೋಮವಾರ ಶಿಕ್ಷೆಯ ಪ್ರಮಾಣ ಪ್ರಕಟಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News