ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ
ಮಂಗಳೂರು, ಜೂ.27: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅನುಷ್ಠಾನಗೊಂಡಿರುವ ಮಂಗಳೂರು ತಾಲೂಕು ಮಟ್ಟದ ವಿವಿಧ ಯೋಜನೆಗಳ ಸಮಿತಿ ಸಭೆಯು ತಹಶೀಲ್ದಾರ್ ರಫೀಕ್ ಚೌಧರಿಯ ಅಧ್ಯಕ್ಷತೆಯಲ್ಲಿ ಶುಕ್ರವಾರ ತಾಲೂಕು ಕಚೇರಿಯಲ್ಲಿ ನಡೆಯಿತು.
ವಿಕಲಚೇತನರ ವಿಶೇಷ ಗುರುತಿನ ಚೀಟಿ ನೋಂದಣಿಗೆ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು. ಮಹಿಳೆಯರ ಮತ್ತು ಮಕ್ಕಳ ಮಾರಾಟ ಸಾಗಾಟ, ವರದಕ್ಷಿಣೆ, ಬಾಲ್ಯವಿವಾಹ, ಮಾದಕ ವ್ಯಸನ, ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಕಂಡು ಬಂದರೆ ಪೊಲೀಸ್ ಇಲಾಖೆಯವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಹಶೀಲ್ದಾರ್ ಸೂಚಿಸಿದರು.
ನಗರದ ಮಂಗಳಮುಖಿಯರು ಗುರುತು ಚೀಟಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಬಾಡಿಗೆ ಮನೆಯಲ್ಲಿರುವ ಮಂಗಳಮುಖಿಯರು ಸ್ವಂತ ನಿವೇಶನ ಮತ್ತು ಉದ್ಯೋಗದ ಬೇಡಿಕೆಯನ್ನು ಸಲ್ಲಿಸಲು ಅವರು ತಿಳಿಸಿದರು.
ಮಂಗಳೂರು (ಗ್ರಾಮಾಂತರ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ.ಕಾರಿಗೆ ಮಾತನಾಡಿ ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 2024-25ನೇ ಸಾಲಿನಲ್ಲಿ 154 ಅರ್ಹ ಫಲಾನುಭವಿ ಗಳನ್ನು ಗುರುತಿಸಿ ನೋಂದಾಯಿಸಲಾಗಿದೆ. ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಲ್ಲಿ ಮೊದಲ ಬಾರಿಗೆ ಗರ್ಭಿಣಿಯಾದ ತಾಯಂದಿರಿಗೆ 5,000 ರೂ. ಹಾಗೂ ಎರಡನೇ ಹೆಣ್ಣು ಮಗುವಾಗಿದ್ದಲ್ಲಿ 6,000 ರೂ.ನೇರವಾಗಿ ಅವರ ಖಾತೆಗೆ ಜಮೆಯಾಗುತ್ತದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸಲಾಗಿದೆ ಎಂದರು.
ಸಭೆಯಲ್ಲಿ ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕಿ ಚಂದ್ರಿಕಾ, ಪೋಲಿಸ್ ಇಲಾಖೆಯ ನವೀನ್ ಮತ್ತಿತರರು ಉಪಸ್ಥಿತರಿದ್ದರು.