×
Ad

ಮಂಗಳೂರು| ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ವಂಚನೆ: ಪ್ರಕರಣ ದಾಖಲು

Update: 2025-06-28 22:05 IST

ಮಂಗಳೂರು, ಜೂ.28: ಯು.ಕೆ.ಯಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ನಂಬಿಸಿ 16 ಲಕ್ಷ ರೂ. ಪಡೆದು ಬಳಿಕ ವಂಚಿಸಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಕೊಡಿಯಾಲಬೈಲಿನಲ್ಲಿರುವ ಯುಕೆ ರೀಗಲ್ ಅಕಾಡಮಿ ಎಂಬ ಸಂಸ್ಥೆಯು ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ಫೇಸ್‌ಬುಕ್‌ನಲ್ಲಿ ಜಾಹೀರಾತು ಪ್ರಕಟಿಸಿತ್ತು. ಅದನ್ನು ಗಮನಿಸಿದ ವ್ಯಕ್ತಿಯೊಬ್ಬರು ತನ್ನ ಮಗನಿಗೆ ಯು.ಕೆ.ನಲ್ಲಿ ಉದ್ಯೋಗಕ್ಕಾಗಿ ವೀಸಾ ಪಡೆಯಲು ಸಂಪರ್ಕಿಸಿದ್ದರು. ಆವಾಗ ಸಂಸ್ಥೆಯವರು 16 ಲಕ್ಷ ರೂ.ನೀಡಿದರೆ 90 ದಿನದಲ್ಲಿ ವೀಸಾ ಮಾಡಿಕೊಡುವ ಭರವಸೆ ನೀಡಿದ್ದರು. ಅದರಂತೆ ಕೋಡಿಯಾಲ್‌ಬೈಲಿನ ಸಂಸ್ಥೆಯ ಕಚೇರಿಗೆ ಹೋದಾಗ ಸೂರಜ್ ಜೋಸೆಫ್ ಎಂಬಾತ 2 ಲಕ್ಷ ರೂ. ನಗದು ಮುಂಗಡವಾಗಿ ಪಡೆದು ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾನೆ. ನಂತರ 16 ಲಕ್ಷ ರೂ. ನೀಡುವಂತೆ ಪದೇ ಪದೆ ಒತ್ತಾಯಿಸಿದ್ದಲ್ಲದೆ ಕೊಡದಿದ್ದರೆ ವೀಸಾ ರದ್ದಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದ. ಅದರಂತೆ 2023ರ ಅ.27ರಂದು 3 ಲಕ್ಷ ರೂ. ಮತ್ತು ಡಿ.1ರಂದು 13 ಲಕ್ಷ ರೂ.ವನ್ನು ಸಂಸ್ಥೆಯ ಖಾತೆಗೆ ಜಮಾ ಮಾಡಿದ್ದರು, ಆ ಬಳಿಕ ಸೂರಜ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ ಎಂದು ದೂರಲಾಗಿದೆ.

2024ರ ಮಾ.20ರಂದು ಕಚೇರಿಗೆ ಹೋದಾಗ ಸೂರಜ್ ಜೋಸೆಫ್ ಅಲ್ಲಿದ್ದು, 3 ತಿಂಗಳೊಳಗೆ ವೀಸಾ ಕಳುಹಿಸುತ್ತೇನೆ. ಇಲ್ಲವಾದಲ್ಲಿ ಆರು ತಿಂಗಳೊಳಗೆ ಹಣವನ್ನು ವಾಪಸ್ ನೀಡುವುದಾಗಿ ಬರೆದು ಕೊಟ್ಟಿದ್ದ. ಆರು ತಿಂಗಳು ಕಳೆದರೂ ವೀಸಾವನ್ನೂ ನೀಡದೆ, ಹಣವನ್ನು ವಾಪಸ್ ಕೊಡದೆ ಮತ್ತೆ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ.

2024ರ ಅ.3ರಂದು ಅದೇ ಕಚೇರಿಗೆ ಹೋದಾಗ 16 ಲಕ್ಷ ರೂ. ಚೆಕ್ ನೀಡಿದ್ದು, ಡಿ.16ರಂದು ಬ್ಯಾಂಕಿಗೆ ಹಾಕಿದಾಗ ಖಾತೆಯಲ್ಲಿ ಹಣವಿಲ್ಲದೆ ಚೆಕ್ ಬೌನ್ಸ್ ಆಗಿದೆ. ಹಾಗಾಗಿ ಹಣ ಪಡೆದು ವೀಸಾ ನೀಡದೆ ವಂಚಿಸಿರುವ ಬಗ್ಗೆ ಹಣ ಕಳಕೊಂಡ ವ್ಯಕ್ತಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News