ಕಾವೂರು: ಮಕ್ಕಳು, ಹಿರಿಯರೆನ್ನದೆ ಮೇಲೆರಗುವ ಬೀದಿ ನಾಯಿಗಳು
ಕಾವೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾವೂರು ಮುರಗುಡ್ಡೆ ಶಾಂತಿನಗರ ಬಳಿ ಬೀದಿ ನಾಯಿಗಳ ಕಾಟ ಅಧಿಕವಾಗಿದ್ದು, ಮಕ್ಕಳು, ಹಿರಿಯರು ಮತ್ತು ಮಹಿಳೆಯರ ಮೇಲೆ ಎರಗಿ ಗಾಯ ಗೊಳಿಸುತ್ತಿವೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತೀದಿನ ಬೀದಿನಾಯಿಗಳು ಮಕ್ಕಳು ಮಹಿಳೆಯರು, ಹಿರಿಯರೆನ್ನದೆ ದಾಳಿ ಮಾಡುತ್ತಿವೆ. ಈ ಬಗ್ಗೆ ಹಲವು ಬಾರಿ ನಗರ ಪಾಲಿಕೆಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಮನಪಾದ ನಿರ್ಲಕ್ಷ್ಯ ದಿಂದಾಗಿ ಗ್ರಾಮಸ್ಥರು ಬೀದಿನಾಯಿಗಳ ದಾಳಿಗೆ ತುತ್ತಾಗುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಶನಿವಾರ ಶಾಂತಿನಗರದಲ್ಲಿನ ಹಳೆಯ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಬೀದಿನಾಯಿಗಳ ಗುಂಪು 7 ವರ್ಷದ ಮಗುವಿನ ಮೇಲೆ ದಾಳಿ ಮಾಡಿದೆ. ತಾಯಿ ಮತ್ತು ಮಗಳು ಗಾಂಧಿನಗರದ ನೆಂಟರ ಮನೆಗೆ ಬರುತ್ತಿದ್ದ ವೇಳೆ ನಾಯಿಗಳು ದಾಳಿ ಮಾಡಿವೆ. ಮಗುವಿನ ಕೈಗೆ ಗಂಭೀರ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಗುವಿನ ಬೊಬ್ಬೆ ಕೇಳಿ ಪಕ್ಕದ ಮನೆಯವರು ನಾಯಿಗಳನ್ನು ಓಡಿಸಿದ್ದಾರೆ. ಇಲ್ಲವಾದರೆ ಮಗುವಿನ ಸ್ಥಿತಿ ಚಿಂತಿಸಲೂ ಸಾಧ್ಯವಿಲ್ಲದ ರೀತಿಯಲ್ಲಿರುತ್ತಿತ್ತು ಎಂದು ಗಾಂಧಿನಗರ ನಿವಾಸಿಗಳು ದೂರಿದ್ದಾರೆ.
ಈ ದಾಳಿಗೂ ಎರಡು ದಿನ ಮುನ್ನ ಮಗುವಿನ ಮೇಲೆ ಸುಮಾರು ಎಂಟು ನಾಯಿಗಳು ದಾಳಿ ಮಾಡಿವೆ. ಆಗಲೂ ಸ್ಥಳೀಯರು ಬಂದು ಮಗುವನ್ನು ನಾಯಿಗಳ ದಾಳಿಯಿಂದ ರಕ್ಷಿಸಿದ್ದರು ಎಂದು ಗ್ರಾಮಸ್ಥರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಸರಿಯಾದ ರಸ್ತೆ ಇಲ್ಲದೆ, ಆಟೊ ರಿಕ್ಷಾ, ಶಾಲಾ ಬಸ್ ಗಳು ಹೆದ್ದಾರಿಯಲ್ಲೆ ನಿಲ್ಲಬೇಕಿದೆ. ಹಾಗಾಗಿ ಮಕ್ಕಳು ನಾದುರಸ್ತಿಯಾಗಿರುವ ರಸ್ತೆಯಲ್ಲಿ ನಡೆದು ಸಾಗಬೇಕಿದೆ. ಇದರಿಂದಾಗಿ ನಾಯಿಗಳ ದಾಳಿಗೆ ತುತ್ತಾಗುವಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ಬೀದಿನಾಯಿಗಳಿಗೆ ಸ್ಥಳೀಯರೇ ಅನ್ನಹಾಕಿ ಸಾಕುತ್ತಿದ್ದಾರೆ. ಕಳ್ಳಕಾರು ಬರದಂತೆ ಅದು ಕಾಯುತ್ತದೆ. ಅದೇ ನಾಯಿಗಳು ಮಕ್ಕಳ ಮೇಲೆದಾಳಿ ಮಾಡುತ್ತಿವೆ. ಇದ್ದ ಅನುದಾನ ಬಳಸಿಕೊಂಡು ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ರಸ್ತೆ ದುರಸ್ತಿಯಾಗಿರುವ ಕಾರಣ ನಾಯಿಗಳ ದಾಳಿ ನಡೆಯುತ್ತಿವೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಸ್ಥಳೀಯ ಕಾರ್ಪೊರೇಟರ್ ಸುಮಂಗಳ ಅವರು ವಾರ್ತಾಭಾರತಿಗೆ ಸ್ಪಷ್ಟನೆ ನೀಡಿದ್ದಾರೆ.
"ಇಲ್ಲಿ ರಸ್ತೆ ಸಮಸ್ಯೆ ಇದೆ ಹಾಗಾಗಿ ಶಾಲಾ ವಾಹನಗಳು ಮನೆಯ ಬಳಿ ಬರುವುದಿಲ್ಲ. ಮಕ್ಕಳು ಮುಖ್ಯ ರಸ್ತೆಯ ಬಳಿ ಹೋಗಿ ವಾಹನ ಹತ್ತಬೇಕು. ಅಲ್ಲಿಗೆ ಹೋಗುವ, ಬರುವ ದಾರಿ ಮಧ್ಯೆ ಬೀದಿ ನಾಯಿಗಳು ದಾಳಿ ಮಾಡುತ್ತಿವೆ. ಮಕ್ಕಳು, ಮಹಿಳೆಯರು, ಹಿರಿಯರ ಮೇಲೆ ಬೀದಿನಾಯಿಗಳು ದಾಳಿ ಮಾಡುತ್ತಿವೆ. ಮನಪಾ ಮಾಜಿ ಸದಸ್ಯೆ, ಆಶಾ ಕಾರ್ಯಕರ್ತೆಯ ಗಮನಕ್ಕೆ ತಂದಿದ್ದೇವೆ. ರಸ್ತೆ ಸರಿಪಡಿಸುವಂತೆ ಮನಪಾ ಆಯುಕ್ತರಿಗೆ ಊರಿನ ಮಹಿಳೆಯರು ದೂರು ನೀಡಿದ್ದರು. ಇದ್ಯಾವುದಕ್ಕೂ ಮನಪಾ ತಲೆ ಕೆಡಿಸಿಕೊಂಡಿಲ್ಲ. ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಮನಪಾದ ನಿರ್ಲಕ್ಯ್ಷದಿಂದಾಗಿ ನಾವು ಬೀದಿ ನಾಯಿಗಳ ದಾಳಿಗೆ ತುತ್ತಾಗುವಂತಾಗಿದೆ".
- ಅಹ್ಮದ್ ಶಬೀರ್, ಶಾಂತಿನಗರ
"ನಾಯಿಗಳು ದಾಳಿ ಮಾಡಿರುವ ಬಗ್ಗೆ ದೂರು ಬಂದಿದೆ. ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಬಹುದು ಹೊರತು ಅವುಗಳನ್ನು ನಿರ್ನಾಮ ಮಾಡಲು ಮನಪಾಕ್ಕೆ ಅವಕಾಶ ಇಲ್ಲ. ನಾನೂ ಈ ಬಗ್ಗೆ ಮಹಾನಹರ ಪಾಲಿಕೆಗೆ ದೂರು ನೀಡಿದ್ದೇನೆ. ಅವರು ಕ್ರಮ ಕೈಗೊಳ್ಳುತ್ತಾರೆ".
-ಸುಮಂಗಳಾ, ಸ್ಥಳೀಯ ಮಾಜಿ ಕಾರ್ಪೊರೇಟರ್
ಪತ್ರಕರ್ತರ ಜೊತೆ ಅನಾಗರೀಕರಂತೆ ವರ್ತಿಸಿದ ಮನಪಾ ಆಯುಕ್ತ
ಬೀದಿ ನಾಯಿಗಳ ದಾಳಿಯ ಬಗ್ಗೆ ʼವಾರ್ತಾಭಾರತಿʼ, ಮಂಗಳೂರು ಮನಪಾ ಆಯುಕ್ತ ರವಿಚಂದ್ರ ನಾಯಕ್ ಅವರನ್ನು ಸಂಪರ್ಕಿಸಿದಾಗ, ಪತ್ರಕರ್ತರನ್ನೇ ದಬಾಯಿಸಿದ್ದಾರೆ. “ ದಾಳಿಗೊಳಗಾದವರ ಮಾಹಿತಿ ನೀಡಿ ಪರಿಹಾರವನ್ನೂ ನೀಡುತ್ತೇನೆ. ಸ್ಥಳೀಯರು, ಸಾರ್ವಜನಿಕರು ಎಂದು ಇಲ್ಲಸಲ್ಲದವರ ಹೆಸರು ಹೇಳಿ ಸುದ್ದಿ ಮಾಡುವುದಲ್ಲ. ಸಂತ್ರಸ್ತರ ಮಾಹಿತಿ ನೀಡಿ, ಅವರಿಗೆ ಪರಿಹಾರ ನೀಡುತ್ತೇನೆ” ಮಾಜಿ ಕಾರ್ಪೊರೇಟರ್ ಮನಪಾಕ್ಕೆ ದೂರು ನೀಡಿದ್ದಾರೆ ಎಂದರೆ, ‘ಅವರು ನನಗೆ ದೂರು ನೀಡಲಿ, ಪರಿಹಾರ ನೀಡುತ್ತೇನೆ’ ಎಂದು ಮನಪಾ ಆಯುಕ್ತ ಎಂಬುದನ್ನೂ ಮರೆತು ಪತ್ರಕರ್ತರನ್ನು ದಭಾಯಿಸಿದ್ದಾರೆ. ಮನಪಾ ಆಯುಕ್ತರೇ ಈ ರೀತಿ ಅನಾಗರೀಕರಂತೆ ವರ್ತಿಸುತ್ತಿರುವಾಗ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಸಾಧ್ಯವೇ ಎಂಬುದು ಪ್ರಶ್ನೆಯಾಗಿದೆ.