×
Ad

ಕಾರ್ಮಿಕರ ಪಾಲಿಗೆ ಮಾರಕವಾದ ಹೊಸ ನೀತಿಯನ್ನು ಹಿಂಪಡೆಯಲು ಎಐಕೆಬಿಇಎ ಆಗ್ರಹ

Update: 2025-06-30 22:42 IST

ಮಂಗಳೂರು: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಧೋರಣೆ ವಿರುದ್ಧ ಹಾಗೂ ಕಾರ್ಮಿಕರ ಪಾಲಿಗೆ ಮಾರಕವಾದ ಹೊಸ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆದು, ಈ ಹಿಂದೆ ಜಾರಿಯಲ್ಲಿದ್ದ 44 ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಇಲ್ಲಿ ರವಿವಾರ ಮುಕ್ತಾಯಗೊಂಡ ಅಖಿಲ ಭಾರತ ಕರ್ಣಾಟಕ ಬ್ಯಾಂಕ್ ನೌಕರರ ಸಂಘದ (ಎಐಕೆಬಿಇಎ) 26ನೇ ಅಖಿಲ ಭಾರತ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಕೋವಿಡ್ ಸಂದರ್ಭದಲ್ಲಿ ಸಂಸತ್ತಿನಲ್ಲಿ ಬಹುಮತವಿದೆ ಎಂಬ ಕಾರಣಕ್ಕೆ ಯಾವುದೇ ಚರ್ಚೆಗೆ ಆಸ್ಪದವಿಲ್ಲದೆ ಕೇಂದ್ರ ಸರಕಾರ ಹೊಸ ಕಾರ್ಮಿಕ ಸಂಹಿತೆಗಳನ್ನು ರೂಪಿಸಿದೆ. ಈ ಸಂಹಿತೆಗಳು ಕಾರ್ಪೊರೇಟ್ ಕಂಪನಿಗಳ ಪರವಾಗಿದೆ. ಕಾರ್ಮಿಕರ ಸೌಲಭ್ಯಗಳಿಗೆ ಕತ್ತರಿ ಹಾಕಲಿವೆ. ಪ್ರತಿಭಟಿಸುವ ಹಕ್ಕನ್ನು ಕಿತ್ತುಕೊಳ್ಳಲಿವೆ. ಕಾರ್ಮಿಕ ಸಮೂಹವನ್ನು ಗುಲಾಮಗಿರಿಯತ್ತ ತಳ್ಳಲಿರುವ ಕಾರ್ಮಿಕ ನೀತಿಯ ವಿರುದ್ಧ ಇದರ ಹೋರಾಟವನ್ನು ತೀವ್ರಗೊಳಿಸುವ ಬಗ್ಗೆ ನಿರ್ಧರಿಸಲಾಯಿತು.

ಖಾಸಗೀಕರಣಕ್ಕೆ ವಿರೋಧ: ‘ಸರಕಾರಿ ಬ್ಯಾಂಕ್‌ಗಳ ಖಾಸಗೀಕರಣ ನಿಲ್ಲಬೇಕು. ಸರಕಾರಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಿ, ಅವುಗಳನ್ನು ರಕ್ಷಿಸುವ ಸಲುವಾಗಿ ವ್ಯಾಪಕ ಹಾಗೂ ಸಂಯೋಜಿತ ಮಾರ್ಗೋ ಪಾಯ ಕಂಡುಕೊಳ್ಳಬೇಕು. ಖಾಯಂ ಉದ್ಯೋಗಗಳನ್ನು ಹೊರಗುತ್ತಿಗೆ ನೀಡುವ ಪರಿಪಾಟದ ವಿರುದ್ಧ ಹೋರಾಟ ರೂಪಿಸಲು ತೀರ್ಮಾನಿಸಲಾಯಿತು.

ಬ್ಯಾಂಕ್‌ ಗಳು ವಾರದ ಐದು ದಿನಗಳಲ್ಲಿ ಮಾತ್ರ ಕಾರ್ಯಾಚರಿಸುವಂತೆ ಮಾಡಲು ಆದಷ್ಟು ಬೇಗ ಸ್ಪಷ್ಟ ನಿರ್ಧಾರ ಕೈಗೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಒತ್ತಾಯಿಸುವ ನಿರ್ಣಯವನ್ನೂ ಕೈಗೊಳ್ಳಲಾಯಿತು.

ಎಐಕೆಬಿಇಎ 80ನೇ ವರ್ಷಾಚರಣೆಯನ್ನು ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ, ಪಟ್ಟಣಗಳಲ್ಲಿ ಸಡಗರದಿಂದ ಆಚರಿಸಲು ನಿರ್ಣಯಿಸಲಾಯಿತು. ಎಐಕೆಬಿಇಎ ಪ್ರಧಾನ ಕಾರ್ಯದರ್ಶಿ ಪಣೀಂದ್ರ ಕೆ.ಜಿ. ಅವರು ವರದಿ ಮಂಡಿಸಿದರು. ಖಜಾಂಚಿ ಗಿರೀಶ್ ಬಿ.ಎಸ್. ಲೆಕ್ಕಪತ್ರ ಮಂಡಿಸಿದರು.

ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ, ಜಂಟಿ ಕಾರ್ಯದರ್ಶಿ ಎಂ. ಜಯಂತ್. ಎಐಕೆಬಿಇಎ ಅಧ್ಯಕ್ಷೆ ಪೂರ್ಣಿಮಾ ರಾವ್, ಪದಾಧಿಕಾರಿಗಳಾದ ಸುರೇಶ್ ಹೆಗ್ಡೆ ಹಾಗೂ ರಾಘವ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News