ಮಹಿಳೆಯರ ಬಗ್ಗೆ ಬಿಜೆಪಿಗೆ ಗೌರವವಿದ್ದರೆ ರವಿಕುಮಾರ್‌ನ್ನು ಪಕ್ಷ , ಶಾಸಕ ಸ್ಥಾನದಿಂದ ವಜಾಗೊಳಿಸಲಿ: ಸೌಮ್ಯ ರೆಡ್ಡಿ ಒತ್ತಾಯ
ಮಂಗಳೂರು, ಜು.3: ಮಹಿಳೆಯರ ಬಗ್ಗೆ ಬಿಜೆಪಿಗೆ ಗೌರವ ಇದ್ದರೆ ರವಿಕುಮಾರ್ ಅವರನ್ನು ಪಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ವಜಾಗೊಳಿಸುವಂತೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಆಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಗುರುವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿ ಮುಂದೆ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಶಾಲಿನಿ ರಜನೀಶ್ ಅವರು, ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ತಾಯಿಯಂತೆ ನಿಂತು ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶ, ಸಂಸ್ಕೃತಿಯ ಪಾಠ ಮಾಡುವ ಇವರಿಗೆ ಮಹಿಳೆಯ ಬಗ್ಗೆ ಗೌರವ ಎಲ್ಲಿ ಹೋಯಿತು. ದೇಶ ಮುಂದೆ ಹೋಗುವ ಬದಲು ಬಿಜೆಪಿಯಿಂದಾಗಿ ಎಲ್ಲೋ ಒಂದು ಕಡೆ ಹಿಂದೆ ಹೋಗುತ್ತಿದೆ ಎಂದು ಸೌಮ್ಯಾ ರೆಡ್ಡಿ ಆರೋಪಿಸಿದರು.
ಬೇಟಿ ಬಚಾವೋ ಪಡಾವೋ ಎಂದು ಪ್ರಧಾನಿ ಮೋದಿ ಹೇಳ್ತಾರೆ. ಬೇಟಿ ಪಡ್ನೇಕೀ ಬಾದ್ ಐಎಎಸ್ ಆಫಿಸರ್ ಬನ್ ಗಯೀ, ಏ ಹಮಾರೆ ಲಿಯೇ ಬಹೂತ್ ಗೌರ್ ಕೀ ಬಾತ್ ಹೈ. ಆದರೆ ಬಿಜೆಪಿಯ ಮುಖಂಡರು ಮಹಿಳೆಯರ ಬಗ್ಗೆ ಅಗೌರವದಿಂದ ಮಾತನಾಡುತ್ತಿದ್ದಾರೆ. ಮಾಜಿ ಸಚಿವ ಸಿ.ಟಿ. ರವಿಯವರು ಸಚಿವರ ಬಗ್ಗೆ ಏನು ಮಾತನಾಡಿದ್ದಾರೆನ್ನುವುದು ಎಲ್ಲರಿಗೂ ಗೊತ್ತಿದೆ ಎಂದರು.
ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಪೂಜಾರಿ ಮಾತನಾಡಿ ‘ದೇಶ, ಸಂಸ್ಕೃತಿ ಬಗ್ಗೆ ಮಾತನಾಡುವ ಬಿಜೆಪಿಯವರೇ, ಮಹಿಳೆಯರನ್ನು ಅಗೌರವಿಸುವುದು ನಿಮ್ಮ ಸಂಸ್ಕೃತಿಯಾ? ಬಿಜೆಪಿಯಲ್ಲಿರುವ ಮಹಿಳೆಯರು ಕಣ್ಮುಚ್ಚಿ ಕೂತಿದ್ದೀರಲ್ವಾ? ನಿಮಗೆ ಸ್ವಾಭಿಮಾನ ಇಲ್ಲವಾ ಎಂದು ಪ್ರಶ್ನಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ , ಮಾಜಿ ಸಚಿವರಾದ ಅಭಯಚಂದ್ರ ಜೈನ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ಮುಖಂಡರಾದ ಕೆ.ಕೆ ಶಾಹುಲ್ ಹಮೀದ್, ಶಾಲೆಟ್ ಪಿಂಟೊ, ಮಂಜುಳಾ ನಾಯಕ್, ಪಿ.ಪಿ. ವರ್ಗಿಸ್, ಉಷಾ ಅಂಚನ್, ಗೀತಾ ಅತ್ತಾವರ, ಎಸ್.ಅಪ್ಪಿ, ಶಕುಂತಲಾ ಕಾಮತ್, ಸಬಿತಾ ಮಿಸ್ಕಿತ್, ಶಾಂತಲಾ ಗಟ್ಟಿ, ಕವಿತಾ ವಾಸು, ಸುರೇಖಾ ಚಂದ್ರಹಾಸ್ ಇನ್ನಿತರರು ಉಪಸ್ಥಿತರಿದ್ದರು.