ಬ್ಯಾರಿ ಅಕಾಡಮಿ ಅಧ್ಯಕ್ಷರ ದ್ವೇಷ ರಾಜಕೀಯ: ರಹೀಂ ಉಚ್ಚಿಲ್ ಆರೋಪ
ರಹೀಂ ಉಚ್ಚಿಲ್
ಮಂಗಳೂರು, ಜು.7: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಉಮರ್ ಯು.ಎಚ್. ದ್ವೇಷ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್ ಆರೋಪಿಸಿದ್ದಾರೆ.
ಬ್ಯಾರಿ ಅಕಾಡಮಿಯ ಎಲ್ಲಾ ಅಧ್ಯಕ್ಷರು ತನ್ನ ಅವಧಿಯ ಕೊನೆಯಲ್ಲಿ ಸಾಧನೆಯ ಕುರಿತು ಪುಸ್ತಕವನ್ನು ರಚಿಸುವುದು ರೂಢಿಯಾಗಿದೆ. ಬ್ಯಾರಿ ಅಕಾಡೆಮಿಯ ಎಲ್ಲಾ ಅವಧಿಯಲ್ಲೂ ಇದು ಪ್ರಕಟವಾಗಿದೆ. ತನ್ನ ಅವಧಿಯ ಸಾಧನೆಯ ನೋಟ ಪುಸ್ತಕ ಪ್ರಕಟವಾಗುವ ವೇಳೆ ತಾನು ಪದಮುಕ್ತರಾದ ಕಾರಣ ಪ್ರಕಟನೆಗೆ ಸಿದ್ಧವಾಗಿದ್ದ ಪುಸ್ತಕ ಪ್ರಕಟನೆ ಆಗಿರಲಿಲ್ಲ. ಹಾಲಿ ಅಧ್ಯಕ್ಷ ಉಮರ್ ಬಳಿ ಈ ಬಗ್ಗೆ ಮನವಿ ಮಾಡಿದರೂ ಪ್ರಕಟಿಸದೆ ದ್ವೇಷದ ರಾಜಕೀಯ ನಡೆಸುತ್ತಿದ್ದಾರೆ ಎಂದು ರಹೀಂ ಉಚ್ಚಿಲ್ ಆರೋಪಿಸಿದ್ದಾರೆ.
ಜನಗಣತಿ ಕಾಲಂನಲ್ಲಿ ಯಾವುದೇ ಭಾಷೆ ನಮೂದು ಆಗಬೇಕಾದರೆ ಆ ಭಾಷೆ ಲಿಪಿ ಹೊಂದಿರಬೇಕು. ರಾಜ್ಯ ಭಾಷೆಯ ಸ್ಥಾನಮಾನ ಬೇಕು. ಈ ನಿಟ್ಟಿನಲ್ಲಿ ತಾನು ತನ್ನ ಅವಧಿಯಲ್ಲಿ ಬ್ಯಾರಿ ಲಿಪಿ ಸಂಶೋಧನೆ, ರಚನೆ, ಅನುಷ್ಠಾನ ಸಮಿತಿಯನ್ನು ರಚಿಸಿ ಸರಳವಾಗಿ ಬ್ಯಾರಿ ಲಿಪಿಯನ್ನು ರಚಿಸಿ ಅನಾವರಣೆಗೊಳಿಸಿದ್ದೆ. ಅದು ಬಳಕೆಗೆ ಅರ್ಹವಾಗಿರತ್ತದೆ. ಆದರೆ ಈ ಲಿಪಿಗೆ ಪ್ರೋತ್ಸಾಹ ನೀಡದೆ ಬ್ಯಾರಿ ಭಾಷೆ ಮತ್ತು ಬ್ಯಾರಿ ಗಳಿಗೆ ವಂಚಿಸಿ ಮುಂದಿನ ಜನಗಣತಿ ಕಾಲಂನಲ್ಲಿ ಬ್ಯಾರಿ ಭಾಷೆ ನಮೂದು ಆಗದಂತೆ ತಡೆಯುವ ಎಲ್ಲಾ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಕಾಡಮಿಯಲ್ಲಿ ಅನುದಾನದ ಕೊರತೆ ಇಲ್ಲದಿದ್ದರೂ ಬ್ಯಾರಿ ಭಾಷೆ, ಕಲೆ, ಸಾಹಿತ್ಯದ ಅಭಿವೃದ್ಧಿಗೆ ಬಳಸದೆ ಬ್ಯಾರಿ ಸಂಗೀತ ಕಲಾವಿದರಿಗೆ, ಸಾಹಿತಿಗಳಿಗೆ, ಹಾಡುಗಾರರಿಗೆ ಅವಕಾಶ ನೀಡದೆ ಸಮಯ ವ್ಯರ್ಥಮಾಡಿದ್ದಾರೆ. ಹಾಗಾಗಿ ಕಲೆ, ಸಾಹಿತ್ಯದ ಬಗ್ಗೆ ಒಲವು ಹೊಂದಿರುವ ಅಧ್ಯಕ್ಷರನ್ನು ನೇಮಿಸಿ ಬ್ಯಾರಿ ಭಾಷಿಗರಿಗೆ ನ್ಯಾಯ ಒದಗಿಸಬೇಕು ಎಂದು ರಹೀಂ ಉಚ್ಚಿಲ್ ಮುಖ್ಯಮಂತ್ರಿ ಮತ್ತು ಸ್ಪೀಕರ್ ಯು.ಟಿ. ಖಾದರ್‌ರನ್ನು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.