×
Ad

ಪಡುಪೆರಾರು ಗ್ರಾಮಸಭೆಯಲ್ಲಿ ಸಮಸ್ಯೆಗಳನ್ನು ಮುಂದಿಟ್ಟ ಗ್ರಾಮಸ್ಥರು

Update: 2025-07-10 20:06 IST

ಮಂಗಳೂರು, ಜು.10: ಪಡುಪೆರಾರ ಗ್ರಾಪಂ ವ್ಯಾಪ್ತಿಯ ಪಡುಪೆರಾರ ಮತ್ತು ಮೂಡುಪೆರಾರ ಗ್ರಾಮಗಳಲ್ಲಿ ವಿದ್ಯುತ್, ರಸ್ತೆ, ತ್ಯಾಜ್ಯ ವಿಲೇವಾರಿ ಮತ್ತಿತರ ಕೆಲವು ಗಂಭೀರ ಸಮಸ್ಯೆಗಳ ಬಗ್ಗೆ ಗುರುವಾರ ನಡೆದ ಪಡುಪೆರಾರ ಗ್ರಾಮಸಭೆಯಲ್ಲಿ ಗಮನ ಸೆಳೆದರು.

ಗ್ರಾಪಂ ಸಭಾಭವನದಲ್ಲಿ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆ, ಸಮಸ್ಯೆಗಳಿಗೆ ಪಂಚಾಯತ್ ಆಡಳಿತ ಹಾಗೂ ಇಲಾಖಾ ಅಧಿಕಾರಿಗಳು ಉತ್ತರಿಸಿದರು.

ಪಡುಪೆರಾರ ಗ್ರಾಪಂ ಮೂಡುಪೆರಾರ ಗ್ರಾಮವನ್ನು ಪ್ರತ್ಯೇಕಿಸಿ ಹೊಸ ಪಂಚಾಯತ್ ಸ್ಥಾಪಿಸಬೇಕು ಎಂದು ಗ್ರಾಮಸ್ಥರು ಬೇಡಿಕೆ ಇಟ್ಟರು. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ನಿರ್ಣಯ ತೆಗೆದುಕೊಂಡು ಮೇಲಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ಪಿಡಿಒ ಉಗ್ಗಪ್ಪಮೂಲ್ಯ ತಿಳಿಸಿದರು.

ಬಜ್ಪೆವಿದ್ಯುತ್ ವಲಯ ವ್ಯಾಪ್ತಿಯಲ್ಲಿದ್ದ ನೀಲಕಣಿ ಪ್ರದೇಶವು ಈಗ ಮುಚ್ಚೂರು ವಲಯಕ್ಕೆ ಸ್ಥಳಾಂತರಗೊಂಡಿದೆ. ಪ್ರಸಕ್ತ ನೀಲಕಣಿಯಲ್ಲಿ ವಿದ್ಯುತ್ ಸಮಸ್ಯೆ ಉಂಟಾದರೆ ಮುಚ್ಚೂರು ವಲಯದ ಸಿಬ್ಬಂದಿಯು ದೂರು ಸ್ವೀಕರಿಸುವುದಿಲ್ಲ. ಇದರಿಂದ ಈ ಭಾಗದ ಜನರಿಗೆ ತೀವ್ರ ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥರೊಬ್ಬರು ದೂರಿದರು.

ಗ್ರಾಮದಲ್ಲಿ ಹಸಿ ಕಸ ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ವೈದಾಧಿಕಾರಿಗಳೇ ಇಲ್ಲ. ನಿರ್ವಹಣೆ ಕೊರತೆಯಿಂದ ಎರಡೂ ಗ್ರಾಮಗಳ ಕೆಲವೆಡೆ ದಾರಿದೀಪಗಳು ಮತ್ತು ಹೈಮಾಸ್ಟ್ ಉರಿಯುತ್ತಿಲ್ಲ. ಮೂಡುಪೆರಾರದಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ಗ್ರಾಪಂಗೆ ಖಾಯಂ ಕಾರ್ಯದರ್ಶಿ, ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿ, ಖಾಯಂ ವಿಎ ನೇಮಕವಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಗ್ರಾಪಂ ಉಪಾಧ್ಯಕ್ಷ ಜಯಂತ ಪೂಜಾರಿ, ಪ್ರಭಾರ ಕಾರ್ಯದರ್ಶಿ ಕಮಲಾಕ್ಷ ಎನ್, ನೋಡೆಲ್ ಅಧಿಕಾರಿಯಾಗಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಸಂಗಮೇಶ ಹೆಳವರ, ಅಬಕಾರಿ ನಿರೀಕ್ಷಕಿ ಸುಮಾ ಜಿ.ಎಂ, ಆರೋಗ್ಯ ಇಲಾಖೆಯ ಮುಮ್ತಾಝ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News