ಮಂಗಳೂರು| ಕೇರಳದ ನಾಲ್ವರಿಗೆ ತಂಡದಿಂದ ಹಲ್ಲೆ: ಪ್ರಕರಣ ದಾಖಲು
ಮಂಗಳೂರು, ಜು.14: ಕೇರಳ ನಾಲ್ಕು ಮಂದಿಯನ್ನು ವ್ಯವಹಾರ ಉದ್ದೇಶಕ್ಕೆ ಕರೆಸಿಕೊಂಡು ಬಳಿಕ ಮಲ್ಲೂರಿಗೆ ಕರೆದೊಯ್ದ ತಂಡವೊಂದು ಹಲ್ಲೆಗೈದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಝಿಕ್ಕೋಡ್ ನಿವಾಸಿ ಅಬ್ದುಲ್ ಮನಾಫ್ ಮತ್ತವರ ಸ್ನೇಹಿತರಾದ ಅರ್ಶಕ್ ಅಹ್ಮದ್, ಯಾಸರ್ ಅರಫತ್ ವಿ.ಪಿ., ಮುಹಮ್ಮದ್ ಸಾಹಿರ್ ಎಂಬವರು ದುಬೈಯಲ್ಲಿ ವ್ಯವಹಾರ ಮತ್ತು ಲ್ಯಾಂಡ್ ಬ್ರೋಕರಿಂಗ್ ಕೆಲಸ ಮಾಡುತ್ತಿದ್ದರು. ಮೂರು ತಿಂಗಳಿನಿಂದ ತನ್ನೂರಾದ ಕೋಝಿಕೋಡ್‌ನಲ್ಲಿ ಬ್ರೋಕರಿಂಗ್ ಕೆಲಸ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮನಾಫ್‌ರ ಪರಿಚಯದ ಮಂಗಳೂರಿನಲ್ಲಿರುವ ಸರ್ಫರಾಝ್ ಎಂಬಾತ ವ್ಯವಹಾರಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಮಂಗಳೂರಿಗೆ ಕರೆದಿದ್ದು, ಅದರಂತೆ ಜು.11ರಂದು ಸಂಜೆ ಮನಾಫ್ ಮತ್ತಿತರರು ಪಂಪ್‌ವೆಲ್‌ಗೆ ಬಂದಿದ್ದರು. ಬಳಿಕ ಅಲ್ಲಿಂದ ಮಲ್ಲೂರಿಗೆ ಕರೆದೊಯ್ದು ನಾಲ್ಕು ಮಂದಿಯನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಸುಮಾರು 10 ಮಂದಿ ಹಲ್ಲೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳು ಯಾಸರ್ ಅರಾಫತ್‌ನ ಕಿಸೆಯಲ್ಲಿದ್ದ 90,000 ರೂ. ಕಿತ್ತರಲ್ಲದೆ, ಮುಹಮ್ಮದ್ ಸಾಹಿರ್‌ನ ಗೂಗಲ್ ಪೇಯಿಂದ 10 ಸಾವಿರ ರೂ. ವರ್ಗಾಯಿಸಿದ್ದಾರೆ. ಅಲ್ಲದೆ ಮೊಬೈಲ್‌ನ ಲಾಕ್ ತೆಗೆಸಿ ಶೇರ್‌ನ ವ್ಯವಹಾರಕ್ಕೆ ಸಂಬಂಧಿಸಿದ ಸ್ಟಾಕ್‌ನ ಅಕೌಂಟ್‌ನಿಂದ 28 ಲಕ್ಷ ರೂ. ಮೌಲ್ಯದ ಶೇರ್‌ಗಳನ್ನು ವರ್ಗಾವಣೆ ಮಾಡಿದ್ದಾರೆ. ಅಲ್ಲದೆ ಪರ್ಸ್, ಪಾನ್ ಕಾರ್ಡ್, ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಹಾಗೂ 1,000 ರೂ. ನಗದು ಸೆಳೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಂಜೆ 5:30ರಿಂದ ರಾತ್ರಿ 10:30ರ ತನಕ ಅಕ್ರಮ ಬಂಧನದಲ್ಲಿರಿಸಿ ಹಲ್ಲೆ ನಡೆಸಿದ್ದು, ಹೊಟ್ಟೆ ಮತ್ತು ತಲೆಗೆ ತುಳಿದ ಕಾರಣ ಅರ್ಶಕ್ ಅಹ್ಮದ್‌ರಿಗೆ ಗಾಯವಾಗಿದೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.