×
Ad

ಕಾಂಗ್ರೆಸ್ ಸರಕಾರ ಕೆಂಪು ಕಲ್ಲು ಸಿಗದಂತೆ ಮಾಡಿದೆ: ವೇದವ್ಯಾಸ ಕಾಮತ್ ಆರೋಪ

Update: 2025-07-14 20:43 IST

ಮಂಗಳೂರು, ಜು.14: ಸ್ವಾತಂತ್ರ್ಯ ಬಂದ ಬಳಿಕ ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಪೂರೈಕೆ ಸ್ಥಗಿತ ಆಗಿರಲಿಲ್ಲ. ಮನೆ, ಕಟ್ಟಡ ನಿರ್ಮಿಸಲು ರಾಜ್ಯದ ಕಾಂಗ್ರೆಸ್ ಸರಕಾರ ಕೆಂಪುಕಲ್ಲು ಸಿಗದಂತೆ ಮಾಡಿದೆ. ಇದರಿಂದ ಕಾರ್ಮಿಕರು ಕಣ್ಣೀರು ಹಾಕುತ್ತಿದ್ದಾರೆ. ಮರಳು, ಕೆಂಪುಕಲ್ಲು ಸಮಸ್ಯೆ ಬಗೆಹರಿಸಲು ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಇದುವರೆಗೆ ಒಂದೇ ಒಂದು ಸಭೆ ನಡೆಸಿಲ್ಲ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕೆಂಪುಕಲ್ಲು ಹಾಗೂ ಮರಳು ಸಮಸ್ಯೆ ಪರಿಹರಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕರಾವಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೊಳಿಸುವುದಾಗಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆ ಯಲ್ಲಿ ಹೇಳಿತ್ತು. ಆದರೆ, ಎರಡು ವರ್ಷವಾದರೂ ಮರಳು ನೀತಿ ಜಾರಿಗೊಂಡಿಲ್ಲ. ಸಿಆರ್‌ಜೆಡ್ ವಲಯದಲ್ಲಿ ಮರಳುಗಾರಿಕೆ ನಡೆಯುತ್ತಿಲ್ಲ. ಅಕ್ರಮ ಮರಳುಗಾರಿಕೆ ನಡೆಯತ್ತಿದ್ದು, ಕಾಂಗ್ರೆಸಿಗರು ಹಣ ಸಂಪಾದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಎರಡು ವರ್ಷಗಳಿಂದ ಪರಿಹಾರ ಕಾಣದ ಮರಳು, ಕೆಂಪುಕಲ್ಲು ಸಮಸ್ಯೆಯನ್ನು ವಾರದೊಳಗೆ ಪರಿಹಾರ ಮಾಡುತ್ತೇವೆ ಎಂದು ರಾಜ್ಯ ಸರಕಾರ ಹೇಳಿದೆ. ಆದರೆ, ಇದುವರೆಗೆ ಪರಿಹಾರ ದೊರೆತಿಲ್ಲ. ಗಣಿ ಇಲಾಖೆಯಲ್ಲಿ ಅಕಾರಗಳೇ ಇಲ್ಲ. ಹಿರಿಯ ಭೂ ವಿಜ್ಞಾನಿ ಪ್ರಭಾರದಲ್ಲಿದ್ದಾರೆ. ಜನರು ಬೀದಿಗೆ ಬಂದು ಛೀಮಾರಿ ಹಾಕುವ ಮುನ್ನ ರಾಜ್ಯ ಕಾಂಗ್ರೆಸ್ ಸರಕಾರ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಜಿಲ್ಲೆಯಲ್ಲಿ ಮರಳು ಹಾಗೂ ಕೆಂಪುಕಲ್ಲು ಪೂರೈಕೆ ಸ್ಥಗಿತದಿಂದ ಕಾರ್ಮಿಕರು ಬೀದಿಪಾಲಾಗಿದ್ದಾರೆ. ಮನೆ, ಕಟ್ಟಡ ನಿರ್ಮಾಣ, ಕಲ್ಲು ಕೋರೆಯ ವರು, ಸಣ್ಣ ಹೋಟೆಲ್ ನಡೆಸುವವರು ತೊಂದರೆಗೆ ಒಳಗಾಗಿದ್ದಾರೆ. ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಶಾಲಾ ಶುಲ್ಕ ಪಾವತಿಸಲು ಹಣವಿಲ್ಲದೆ ಪರದಾಡುತ್ತಿದ್ದಾರೆ. ಸಮಸ್ಯೆ ಬಗೆಹರಿಸಬೇಕಾದ ಉಸ್ತುವಾರಿ ಸಚಿವರು ಸುಮ್ಮನಿದ್ದಾರೆ ಎಂದರು.

ಒಂದು ಟನ್ ಕೆಂಪುಕಲ್ಲಿಗೆ ಕೇರಳದಲ್ಲಿ 32 ರೂ. ರಾಯಲ್ಟಿ ಇದ್ದರೆ, ರಾಜ್ಯದಲ್ಲಿ 282 ರೂ. ಇದೆ. ಕೆಂಪುಕಲ್ಲು ಪರವಾನಿಗೆಗೆ ಅರ್ಜಿ ಸಲ್ಲಿಸಿದರೆ 21 ದಿನದೊಳಗೆ ಇತ್ಯರ್ಥವಾಗುವ ಬದಲಿಗೆ 8-10 ತಿಂಗಳು ವಿಳಂಬಿಸಲಾಗುತ್ತಿದೆ. ಸಮಸ್ಯೆ ಪರಿಹರಿಸದಿದ್ದರೆ ಬಿಜೆಪಿ ಇನ್ನಷ್ಟು ಪ್ರಬಲ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಾಜಿ ಮೇಯರ್‌ಗಳಾದ ದಿವಾಕರ ಪಾಂಡೇಶ್ವರ, ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ವಿಜಯಕುಮಾರ್ ಶೆಟ್ಟಿ ಭಾಗವಹಿಸಿದ್ದರು.

ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News