×
Ad

ಧರ್ಮಸ್ಥಳ ಪ್ರಕರಣ: ಸಕಾರ ಎಸ್‌ಐಟಿ ರಚಿಸಿ ನಿಷ್ಪಕ್ಷಪಾತ ತನಿಖೆ ನಡೆಸಲು ಡಿವೈಎಫ್‌ಐ ಆಗ್ರಹ

Update: 2025-07-18 19:16 IST

ಬೆಂಗಳೂರು, ಜು.18: ಧರ್ಮಸ್ಥಳದಲ್ಲಿ ಕ್ರೂರವಾಗಿ ಹತ್ಯೆಗೈದು ಹೆಣಗಳನ್ನು ಹೂತು ಹಾಕಿದ ಪ್ರಕರಣ ಗಳ ಸಾಕ್ಷಿ ನೀಡಲು ಪ್ರತ್ಯಕ್ಷದರ್ಶಿ ದೂರದಾರರು ಮುಂದೆ ಬಂದಿದ್ದಾರೆ. ಹಾಗಾಗಿ ರಾಜ್ಯ ಸರಕಾರ ಧರ್ಮಸ್ಥಳ ಸರಣಿ ಹತ್ಯೆ ಪ್ರಕರಣ ಕುರಿತು ಎಸ್‌ಐಟಿ ರಚಿಸಿ ನಿಷ್ಪಕ್ಷಪಾತ ತನಿಖೆಗೆ ಮುಂದಾಗಬೇಕು ಎಂದು ಡಿವೈಎಫ್‌ಐ ರಾಜ್ಯ ಸಮಿತಿಯು ಒತ್ತಾಯಿಸಿದೆ.

ಧರ್ಮಸ್ಥಳದಲ್ಲಿ ಕೊಲೆಗೈದ ಶವಗಳನ್ನು ಹೂತು ಹಾಕಿರುವುದಾಗಿ ಪ್ರತ್ಯಕ್ಷದರ್ಶಿಯಾಗಿರುವ ದೂರುದಾರ ವ್ಯಕ್ತಿ (ನಾಪತ್ತೆ) ತಲೆಮರೆಸಿಕೊಳ್ಳದಂತೆ ಕಾಯುವ ಹಾಗೂ ರಕ್ಷಣೆ ಒದಗಿಸುವ ಮಹತ್ವದ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ. ಕಾಂಗ್ರೆಸ್ ಸರಕಾರ ಈ ಕುರಿತು ಕಟ್ಟೆಚ್ಚರ ವಹಿಸಬೇಕಿದೆ. ಹೆಚ್ಚುಕಮ್ಮಿಯಾದರೆ ಸರಕಾರದ ಮೇಲೆ ಗಂಭೀರ ಪರಿಣಾಮ ಆಗಲಿದೆ ಎಂಬುದನ್ನು ಮರೆಯಬಾರದು. ಧರ್ಮಸ್ಥಳದ ಬಗ್ಗೆ ತಮಗಿರುವ ಇರುವ ಭಾವನಾತ್ಮಕ ನಂಟನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಇಡೀ ಸನ್ನಿವೇಶವನ್ನು ಇನ್ನಷ್ಟು ಸಂಕೀರ್ಣಗೊಳಿಸಲು ಮುಂದಾಗಬಾರದು. ಕಾಂಗ್ರೆಸ್ ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲದಿದ್ದರೆ ಎಸ್‌ಐಟಿ ರಚನೆಯಿಂದಲೂ ನ್ಯಾಯ ಸಿಗಲಾರದು. ಸೌಜನ್ಯ ಪ್ರಕರಣ ತನಿಖೆಯ ಸಂದರ್ಭ ಎಸ್‌ಐಟಿ ರಚನೆಯಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಧರ್ಮಸ್ಥಳದ ಪಾತಕಗಳ ಸತ್ಯಾಸತ್ಯತೆ ತಿಳಿಯುವುದು ರಾಜ್ಯದ ಜನತೆಯ ಹಕ್ಕಾಗಿದೆ. ಹಾಗಾಗಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಎಸ್‌ಐಟಿ ರಚನೆ ಮಾಡಿ ಹಾಲಿ ಅಥವಾ ನಿವೃತ್ತ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಡಿವೈಎಫ್‌ಐ ರಾಜ್ಯ ಸಮಿತಿಯ ಅಧ್ಯಕ್ಷ ಲವಿತ್ರ ವಸ್ತ್ರದ ಮತ್ತು ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News