ದ.ಕ.ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೆ ಸೆಂಟ್ರಲ್ ಕಮಿಟಿ ಮನವಿ
ಮಂಗಳೂರು: ಪುತ್ತೂರು ತಾಲೂಕಿನ ಬೊಳುವಾರು ಎಂಬಲ್ಲಿ ಹಾಸನ ಮೂಲದ ರಾಜು ಎಂಬಾತನು ಮಾರಕಾಸ್ತ್ರವನ್ನು ಸಾರ್ವಜನಿಕರಿಗೆ ತೋರಿಸಿ ಭಯದ ವಾತಾವರಣ ಸೃಷ್ಟಿಸಿದ್ದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ನಿಯೋಗವು ದ.ಕ.ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್‌ರ ನಿರ್ದೇಶನದಂತೆ ಮನವಿ ಮಾಡಿದ ನಿಯೋಗವು ಈ ಕೃತ್ಯದ ಆರೋಪಿಗೆ ಪ್ರೇರಣೆ ನೀಡಿದವರು ಯಾರು ಹಾಗೂ ಯಾವ ಉದ್ದೇಶ ಕ್ಕಾಗಿ ಆತ ಮಸೀದಿಯ ಬಳಿ ಬಂದಿದ್ದ ಎಂಬುದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ನಿಯೋಗದಲ್ಲಿ ಕಮಿಟಿಯ ಉಪಾಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಹಾಜಿ ಅಹ್ಮದ್ ಬಾವಾ ಪಡೀಲ್, ಬಿ.ಎಸ್. ಇಮ್ತಿಯಾಝ್, ಎನ್.ಕೆ. ಅಬೂಬಕರ್, ಅಬ್ಬಾಸ್ ಉಚ್ಚಿಲ್, ಹಾಜಿ ಅಬ್ದುಲ್ ಮಜೀದ್ ಸಿತಾರ್, ಹಾಜಿ ಮುಹಮ್ಮದ್ ರಫೀಕ್ ಕೊಡಾಜೆ ಉಪಸ್ಥಿತರಿದ್ದರು.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಶಾಂತಿ ಸಭೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕರಾವಳಿ ಯಲ್ಲಿ ಕೋಮುಗಲಭೆಯಾಗಲು ಲವ್ ಜಿಹಾದ್ ಹಾಗೂ ಗೋಹತ್ಯೆ ಎಂದಿದ್ದರು. ಈಗ ನಡೆದಿರುವ ಘಟನೆ ಬಗ್ಗೆ ಶಾಸಕರು ಏನು ಹೇಳುತ್ತಾರೆ ಎಂದು ಹೇಳಿಕೆ ನೀಡುವಂತೆಯೂ ಮುಸ್ಲಿಂ ಕಮಿಟಿಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.