×
Ad

ಪುತ್ತೂರು| ಸೀರತ್ ಕಮಿಟಿಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾಸಂಸ್ಥೆಗಳಿಗೆ ಅಭಿನಂದನೆ, ಉಪನ್ಯಾಸ ಕಾರ್ಯಕ್ರಮ

Update: 2025-07-19 20:19 IST

ಪುತ್ತೂರು: ವಿದ್ಯಾರ್ಥಿಗಳು ತಮ್ಮ ಕಲಿಕೆಯ ಹಂತದಲ್ಲಿ ಮೊಬೈಲ್ ಬಿಟ್ಟು ಬಿಡಿ. ಪುಸ್ತಕವನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಿ, ಪುಸ್ತಕವನ್ನು ಹೆಚ್ಚು ಪ್ರೀತಿಸುವುದರಿಂದ ಪ್ರಬುದ್ಧತೆ ಬೆಳೆಯುತ್ತದೆ. ಅದರೊಂದಿಗೆ ದೊಡ್ಡ ಕನಸು ಕಾಣುತ್ತಾ ಅದನ್ನು ನೆನಸು ಮಾಡುವ ಪ್ರಯತ್ನದಲ್ಲಿರಿ ಇದರಿಂದ ಬದುಕು ಉಜ್ವಲವಾಗುತ್ತದೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅವರು ಪುತ್ತೂರು ತಾಲೂಕು ಸೀರತ್ ಕಮಿಟಿ ನೇತೃತ್ವದಲ್ಲಿ ಶನಿವಾರ ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಪ್ರತಿಭಾನ್ವಿತ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮುಸ್ಲಿಂ ವಿದ್ಯಾಸಂಸ್ಥೆಗಳಿಗೆ ವಿಶೇಷ ಗೌರವ ಅಭಿನಂದನೆ ಮತ್ತು ಉಪನ್ಯಾಸ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ಮಾಡುತ್ತಿರುವ ದಾನಗಳಲ್ಲಿ ಶ್ರೇಷ್ಟ ದಾನವು ವಿದ್ಯಾದಾನವಾಗಿದೆ. ಅದು ವ್ಯಕ್ತಿಯ ಬದುಕಿನ ಕೊನೆಯ ತನಕ ಆತನನ್ನು ಕಾಪಾಡುತ್ತದೆ. ವಿದ್ಯಾವಂತರು ಉತ್ತಮ ಬದುಕು ಸಾಧಿಸಲು ಸಾಧ್ಯವಿದೆ. ಮಕ್ಕಳಲ್ಲಿ ಕನಸು ಬಿತ್ತುವ ಕೆಲಸವನ್ನು ಹೆತ್ತವರು ಮಾಡಬೇಕಾಗಿದೆ. ಅವರ ಸಾಧನೆಗೆ ಅದು ಪ್ರೇರಣೆ ಯಾಗುತ್ತದೆ. ಸಾಧನೆಯಲ್ಲಿ ಹೆತ್ತವರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಶ್ರಮದ ಅಗತ್ಯವಿದೆ.ಶಿಕ್ಷಣ ಎಂಬದು ಪುಕ್ಕಟೆಯಾಗಿ ಸಿಗುವ ವಸ್ತುವಲ್ಲ. ಅದಕ್ಕೆ ಶ್ರಮ ಮತ್ತು ಪ್ರಯತ್ನ ಬೇಕಾಗಿದೆ ಎಂದರು.

ಉಪನ್ಯಾಸ ನೀಡಿದ ಶಿಕ್ಷಕ ಅಬ್ದುಲ್ ರಝಾಕ್ ಅನಂತಾಡಿ ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಶಾಲಾ ಪಠ್ಯದ ಜೊತೆಗೆ ತಮ್ಮ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಮೊದಲಿಗೆ ತಾನು ಏನಾಗಬೇಕು ಎಂಬ ಗುರಿಯನ್ನು ಹೊಂದಬೇಕು. ಬಳಿಕ ಆ ಗುರಿಯನ್ನು ತಲುಪಲು ಏನು ಮಾಡಬೇಕು ಎಂಬ ದಾರಿ ಯನ್ನು ಕಂಡುಕೊಳ್ಳಬೇಕು. ಈ ಬಾರಿ ಪಡೆದ ಅಂಕಗಳಿಗಿಂತ ಮುಂದಿನ ಬಾರಿ ಹೆಚ್ಚು ಅಂಕ ಪಡೆಯುವ ಸೆಲ್ಫ್ ಟಾರ್ಗೆಟ್ ಅಳವಡಿಸಿಕೊಂಡು ಅದಕ್ಕಾಗಿ ಪ್ರತಿಜ್ಞೆ ಕೈಗೊಂಡು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿ ಕೊಳ್ಳಬೇಕು. ಹೆಚ್ಚಿನ ಮೊಬೈಲ್ ಬಳಕೆಯು ಕಲಿಕೆಗೆ ತೊಡಕಾಗುವ ಅಪಾಯವಿದೆ. ಈ ನಿಟ್ಟಿನಲ್ಲಿ ಮೊಬೈಲ್‌ನಿಂದ ದೂರವಿದ್ದು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಕಾಲೇಜ್‌ನ ಗ್ರಂಥಾಲಯವನ್ನು ಹೆಚ್ಚು ಬಳಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮುಸ್ಲಿಂ ವಿದ್ಯಾಸಂಸ್ಥೆಗಳಾದ ಆಯಿಷಾ ಪಿ.ಯು ಕಾಲೇಜು ಆತೂರು, ಬದ್ರಿಯಾ ಪಿ.ಯು. ಕಾಲೇಜು ಆತೂರು, ಇಂಡಿಯನ್ ಆಂಗ್ಲಮಾಧ್ಯಮ ಶಾಲೆ ಉಪ್ಪಿನಂಗಡಿ, ಈಡನ್ ಗ್ಲೋಬಲ್ ಶಾಲೆ ಬೆಳಂದೂರು, ಖಲೀಲ್ ಸ್ವಲಾಹ್ ಶಾಲೆ ಗಾಳಿಮುಖ, ಮೌಂಟನ್ ವ್ಯೂ ಪಿ.ಯು. ಕಾಲೇಜು ಸಾಲ್ಮರ, ಅರಫಾ ವಿದ್ಯಾಕೇಂದ್ರ ಉಪ್ಪಿನಂಗಡಿ ಇವುಗಳನ್ನು ಅಭಿನಂದಿಸಿ ಗೌರವ ಸಲ್ಲಿಸಲಾಯಿತು. ಅಲ್ಲದೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕೆ ಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸುಮಾರು 65ಕ್ಕೂ ಅಧಿಕ ಪ್ರತಿಭಾನ್ವಿತ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪ್ರತಿಭಾ ಪುರಸ್ಕಾರ ಪಡೆದುಕೊಂಡರು.

ಪುತ್ತೂರು ತಾಲೂಕು ಸೀರತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಸುರಯ್ಯ ಅಧ್ಯಕ್ಷತೆ ವಹಿಸಿದ್ದರು. ಗಾಳಿಮುಖ ಖಲೀಲ್ ಸ್ವಲಾಹ್ ಶಿಕ್ಷಣ ಸಂಸ್ಥೆಯ ಸಂಚಾಲಕ ಸಯ್ಯದ್ ಹಸನ್ ಅಬ್ದುಲ್ಲ ಇಂಬಿಚ್ಚಿಕೋಯ ತಂಙಳ್, ಸೀರತ್ ಕಮಿಟಿ ಪದಾಧಿಕಾರಿಗಳಾದ ಅಬ್ದುಲ್ ರಹಿಮಾನ್ ಆಝಾದ್, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಬಿ.ಎ. ಶಕೂರ್ ಹಾಜಿ, ಆರ್. ಪಿ ರಝಾಕ್ ಹಾಜಿ, ಅಶ್ರಫ್ ಕಲ್ಲೇಗ, ಮಹಮ್ಮದ್ ಸಾಬ್ ಕೂರ್ನಡ್ಕ, ಖಾದರ್ ಕಬಕ ಮತ್ತಿತರರು ಉಪಸ್ಥಿತರಿದ್ದರು.

ಸೀರತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಹಾಜಿ ಅಬೂಬಕ್ಕರ್ ಆರ್ಲಪದವು ಪ್ರಾಸ್ತಾವಿಕ ಮಾತುಗಳನ್ನಾ ಡಿದರು. ಕೋಶಾಧಿಕಾರಿ ಎಲ್.ಟಿ. ರಝಾಕ್ ಹಾಜಿ ಸ್ವಾಗತಿಸಿದರು. ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ನಿರೂಪಿಸಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News