ಪುತ್ತೂರು ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ
ಪುತ್ತೂರು: ಬ್ರ್ಯಾಂಡ್ ಮಂಗಳೂರು ಕಾರ್ಯರೂಪಕ್ಕೆ ಬರುವಲ್ಲಿ ಜಿಲ್ಲೆಯ ಪತ್ರಕರ್ತರ ಕೊಡುಗೆ ಸಾಕಷ್ಟಿದೆ. ಅದೇ ರೀತಿ ಜಿಲ್ಲೆಯ ಎರಡನೇ ಅತಿದೊಡ್ಡ ನಗರವಾದ ಪುತ್ತೂರನ್ನು ಕೇಂದ್ರೀಕರಿಸಿಕೊಂಡು ಬ್ರ್ಯಾಂಡ್ ಪುತ್ತೂರು ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಪತ್ರಕರ್ತರು ಮುಂದೆ ನಿಂತು ಮಹತ್ವದ ಕೊಡುಗೆ ನೀಡಬೇಕು ಎಂದು ಪುತ್ತೂರು ನಗರಸಭೆ ಪೌರಾಯುಕ್ತರಾದ ಮಧು ಎಸ್. ಮನೋಹರ್ ಹೇಳಿದರು.
ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಪುತ್ತೂರು ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪುತ್ತೂರು ನಗರದ ಆಡಳಿತ ಸುಧಾರಣೆ ಮಾಡುವಲ್ಲಿ ಪತ್ರಕರ್ತರು ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಬರುವ ಟೀಕೆ, ವಿಮರ್ಶೆ, ಸಮಸ್ಯೆ ಬಿಂಬಿತ ಸುದ್ದಿಗಳನ್ನು ನಾವು ಧನಾತ್ಮಕವಾಗಿ ಸ್ವೀಕರಿಸಿಕೊಂಡು ಸಾಕಷ್ಟು ಬದಲಾವಣೆ ತಂದಿದ್ದೇವೆ ಎಂದು ಹೇಳಿದರು.
ಈ ಸಂದರ್ಭ ದ್ವಿತೀಯ ಪಿಯುಸಿಯಲ್ಲಿ ಉನ್ನತ ಸಾಧನೆ ಮಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಸದಸ್ಯ ಮೇಘ ಪಾಲೆತ್ತಾಡಿ ಅವರ ಪುತ್ರಿ ಪುಣ್ಯಶ್ರೀ, ಸಂಶುದ್ಧೀನ್ ಸಂಪ್ಯ ಅವರ ಪುತ್ರಿ ಸಿಹಾ ಶಮ್ರಾ ಮತ್ತು ಕುಮಾರ್ ಕಲ್ಲಾರೆ ಅವರ ಪುತ್ರಿ ಕೃತಿ ಕೆ ಅವರನ್ನು ಸಂಘದ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಸನ್ಮಾನಿಸಿ ಗೌರವಿಸಿದರು. ಬಳಿಕ ಮಾತನಾಡಿದ ಅವರು ಪತ್ರಿಕೆ ಮತ್ತು ಸಾಹಿತ್ಯ ಬೇರೆಯಲ್ಲ ಅಭಿವ್ಯಕ್ತಿಯ ವಿಧಾನ ಮಾತ್ರ ಬೇರೆ ಇರಬಹುದು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮವು ಇತರ 3 ಅಂಗಗಳು ತಪ್ಪಿದಾಗ ತಿದ್ದುವ ಮಹೋನ್ನತ ಕೆಲಸ ಮಾಡುತ್ತದೆ. ಅವುಗಳನ್ನು ಅಲುಗಾಡಿಸುವ ಶಕ್ತಿಯೂ ಮಾಧ್ಯಮಕ್ಕಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘ ದಕ್ಷಿಣಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ ಜಿಲ್ಲಾ ಸಂಘದಿಂದ ಸುವರ್ಣ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗುವುದು. ಇದು ಎಲ್ಲ ತಾಲೂಕು ಮಟ್ಟದಲ್ಲೂ ನಡೆಯಲಿದೆ ಎಂದರು. ಜಿಲ್ಲಾ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಶುಭ ಕೋರಿದರು. ಪುತ್ತೂರು ಸಂಘದ ಅಧ್ಯಕ್ಷ ಸಿದ್ದಿಕ್ ನೀರಾಜೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸದಸ್ಯ ಮೇಘಾ ಪಾಲೆತ್ತಡಿ ಸ್ವಾಗತಿಸಿದರು. ಸದಸ್ಯ ಸುಧಾಕರ ಸುವರ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ ವಂದಿಸಿದರು.