×
Ad

ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆ

Update: 2025-08-01 21:19 IST

ಮಂಗಳೂರು, ಆ.1: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯು ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್‌ರ ಅಧ್ಯಕ್ಷತೆಯಲ್ಲಿ ಗುರುವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜರುಗಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಹರೀಶ್ ಕುಮಾರ್ ಕೇಂದ್ರ ಸರಕಾರದ ಭದ್ರತಾ ಲೋಪದ ಕಾರಣಕ್ಕೆ ಪಹಲ್ಗಾಮ್‌ನಲ್ಲಿ ದೇಶದ 26 ಅಮಾಯಕ ನಾಗರಿಕರ ಹತ್ಯೆಯಾಯಿತು. ಈ ಬಗ್ಗೆ ಸಂಸತ್ ಅಧಿವೇಶನಲ್ಲಿ ಕಾಂಗ್ರೆಸ್ ನಾಯಕರು ಪ್ರಶ್ನಿಸಲು ಮುಂದಾದರೆ ಸರಿಯಾದ ಉತ್ತರ ನೀಡಬೇಕಾದ ಪ್ರಧಾನಿ ಮೋದಿ ಸುಳ್ಳಿನ ಮುಖಾಂತರ ಜನರ ಭಾವನೆ ತಿರುಚಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿತ್ತು. ಸಂಚುಕೋರರ ವಿರುದ್ಧ ಕೇಂದ್ರ ಸರಕಾರ ಕೈಗೊಳ್ಳುವ ಕಠಿಣ ನಿರ್ಧಾರಕ್ಕೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಆದರೆ ಪ್ರಧಾನಿ ಮೋದಿ ಈಗ ರಾಜಕೀಯಗೊಳಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

ಎರಡು ಬಾರಿ ಸರ್ವ ಪಕ್ಷ ಸಭೆ ಕರೆದರೂ ಪ್ರಧಾನಿ ಬರಲಿಲ್ಲ. ದೇಶಕ್ಕಾಗಿ ಹೋರಾಡಿದ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ಇಂತಹ ಪಕ್ಷದ ಮೇಲೆ ಪ್ರಧಾನಿ ಯಾವುದೇ ಕಾರಣಕ್ಕೂ ಗೂಬೆ ಕೂರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಆ.17ರಂದು ಕಡಬ ಪಟ್ಟಣ ಪಂಚಾಯತ್‌ಗೆ ನಡೆಯಲಿರುವ ಚುನಾವಣೆಯನ್ನು ಗಂಭೀರವಾಗಿ ಪರಿಗಣಿ ಸಲಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮವಹಿಸಿ ಜಿಲ್ಲೆಗೆ ಸಂದೇಶ ರವಾನಿಸಬೇಕು. ಈ ನಿಟ್ಟಿನಲ್ಲಿ ನಾಯಕರು, ಕಾರ್ಯಕರ್ತರು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದ ಅವರು, ಆ.30ರ ಒಳಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಜಿಪಂ, ತಾಪಂ ಮಾಜಿ ಸದಸ್ಯರು, ಗ್ರಾಪಂ ಚುನಾಯಿತ ಪ್ರತಿನಿಧಿ ಮತ್ತು ಪರಾಜಿತ ಅಭ್ಯರ್ಥಿಗಳ ಸಮಾವೇಶ ಆಯೋಜಿಸಬೇಕು ಎಂದು ಬ್ಲಾಕ್ ಅಧ್ಯಕ್ಷರುಗಳಿಗೆ ಸೂಚಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಖಂಡಿಸಿ ಕೆಪಿಸಿಸಿ ವತಿಯಿಂದ ಆ.5ರಂದು ಬೆಂಗಳೂರಿನ ಮಹದೇವಪುರದಲ್ಲಿ ಆಯೋಜಿಸಿರುವ ಪ್ರತಿಭಟನೆಗೆ ಜಿಲ್ಲೆಯಿಂದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಹರೀಶ್ ಕುಮಾರ್ ಕರೆ ನೀಡಿದರು.

ಮಾಜಿ ಮೇಯರ್ ಶಶಿಧರ್ ಹೆಗ್ಡೆ ಸ್ವಾಗತಿಸಿದರು. ಸಭೆಯಲ್ಲಿ ಮಾಜಿ ಶಾಸಕಿ ಶಂಕುತಳಾ ಶೆಟ್ಟಿ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ದಯರ್ಶಿ ಪದ್ಮರಾಜ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮುಹಮ್ಮದ್, ಮುಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಮುಖಂಡರಾದ ಕೆ.ಕೆ.ಶಾಹುಲ್ ಹಮೀದ್, ಕೆ.ಅಪ್ಪಿ, ಉಷಾ ಅಂಚನ್, ಜೋಕಿಂ ಡಿಸೋಜ, ದಿನೇಶ್ ಮೂಳೂರು, ಇಬ್ರಾಹೀಂ ನವಾಝ್, ಶಾಲೆಟ್ ಪಿಂಟೊ, ಸುಹಾನ್ ಆಳ್ವ, ಚೇತನ್ ಬೆಂಗ್ರೆ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿಗೆ ನಿಧನರಾದ ಜಿಪ ಮಾಜಿ ಸದಸ್ಯ ಕುಂಞಿಪಳ್ಳಿ ಸುಳ್ಯ, ಬಂಟ್ವಾಳ ಪುರಸಭೆ ಸದಸ್ಯ ಜನಾರ್ದನ ಚೆಂಡ್ತಿಮಾರ್, ಜಿಪಂ ಮಾಜಿ ಸದಸ್ಯ ಚಂದ್ರಲಿಂಗಂ, ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷ ಓಶ್ರೀ ಅವರಿಗೆ ಸಂತಾಪ ಸೂಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News