ನ.29: ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ
ಮಂಗಳೂರು,ನ.28: ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2022ನೇ ಸಾಲಿನ ಮರ್ಹೂಮ್ ಯು.ಟಿ. ಫರೀದ್ ಸ್ಮರಣಾರ್ಥ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮತ್ತು ಕನ್ನಡ, ಉರ್ದು ಕವಿಗೋಷ್ಠಿಯು ನ.29ರ ಸಂಜೆ 6ಕ್ಕೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿದೆ.
ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಡಾ. ಕೆ. ಷರೀಫಾ (ಕೃತಿ: ನೀರೊಳಗಣ ಕಿಚ್ಚು) ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಚಿಂತಕ ಡಾ. ನಟರಾಜ್ ಹುಳಿಯಾರ್ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಶಿವಕುಮಾರ ಮಾವಲಿ, ಮುಹಮ್ಮದ್ ಆಝಮ್ ಶಾಹಿದ್, ದೀಪದ ಮಲ್ಲಿ, ಮುನೀರ್ ಅಹ್ಮದ್ ಜಾಮಿ, ಫರ್ಹನಾಝ್ ಮಸ್ಕಿ ಹಾಗೂ ನದೀಮ್ ಫಾರೂಖಿ ಕವಿಗೋಷ್ಠಿಯಲ್ಲಿ ಕನ್ನಡ-ಉರ್ದು ಕವನ ವಾಚಿಸಲಿದ್ದಾರೆ. ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಅಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.