×
Ad

ದ.ಕ.ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಗಾಗಿ ಶೀಘ್ರವೇ ಶಾಂತಿ ಸಭೆ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

Update: 2025-05-31 21:35 IST

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಮರು ಸ್ಥಾಪಿಸುವ ದೃಷ್ಟಿಯಿಂದ ಮನಸ್ಸುಗಳನ್ನು ಒಗ್ಗೂಡಿಸಲು ಶೀಘ್ರವೇ ಶಾಂತಿ ಸಮಿತಿ ಸಭೆ ಕರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶನಿವಾರ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಪರಸ್ಪರರೊಳಗಿನ ಮನಸ್ತಾಪ ದೂರಗೊಳಿಸಿ ಬಂಧುತ್ವ ಗಟ್ಟಿಗೊಳಿಸಲು ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದು ಒಂದು ವಾರ, ಒಂದು ವರ್ಷದ ಕೆಲಸ ಅಲ್ಲ, ಶಾಶ್ವತವಾಗಿ ಕದಡಿದ ಮನಸ್ಸನ್ನು ಒಂದು ಮಾಡುವ ಕಾರ್ಯ ನಡೆಯಬೇಕು. ಕರಾವಳಿಯ ಶೇ.98 ಮಂದಿಗೆ ಶಾಂತಿ ಬೇಕು, ಶೇ. 2 ರಷ್ಟು ಮಂದಿಗೆ ಸ್ವಾರ್ಥ, ರಾಜಕೀಯ ಲಾಭ, ಸಂಘಟನೆ ದುರುಪಯೋಗಪಡಿಸಲು ಅಶಾಂತಿಯನ್ನು ಉಂಟು ಮಾಡುತ್ತಿದ್ದಾರೆ. ಅದೇ ಸಾಧನೆ ಎಂದು ಮಾತನಾಡುತ್ತಾರೆಯೇ ವಿನಃ ಬೇರೇನೂ ಮಾಡುವುದಿಲ್ಲ. ಸಮಾಜದಲ್ಲಿ ಕಾನೂನು, ಸುವ್ಯವಸ್ಥೆ ಸ್ಥಾಪಿಸುವ ಬಗ್ಗೆ ಎಲ್ಲ ಸಮಾಜದ ಮುಖಂಡರನ್ನು ಆಹ್ವಾನಿಸಿ ಅಭಿಪ್ರಾಯ ಸಂಗ್ರಹಿಸುತ್ತೇವೆ ಎಂದರು.

ರಾಜಕೀಯ ಹಸ್ತಕ್ಷೇಪ ಇಲ್ಲ ಮಂಗಳೂರು ನಗರ ಹಾಗೂ ಗ್ರಾಮಾಂತರಕ್ಕೆ ಹೊಸ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರಿಬ್ಬರಿಗೂ ಒಳ್ಳೆಯ ಸಾಮರ್ಥ್ಯ ಇರುವ ಅಧಿಕಾರಿ ಎಂಬ ಒಳ್ಳೆಯ ಹೆಸರಿದೆ. ದ.ಕ. ಜಿಲ್ಲೆಯಲ್ಲಿಯೂ ಅದನ್ನೇ ನಿರೀಕ್ಷೆ ಮಾಡಲಾಗುತ್ತಿದೆ. ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುವ ವಿಶ್ವಾಸ ಇದೆ. ಭದ್ರತೆ ಮತ್ತು ಕಾನೂನು ಉಲ್ಲಂಘನೆ ವಿರುದ್ಧ ಯಾವುದೇ ರಾಜಿ ಇಲ್ಲದಂತೆ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ. ಯಾವುದೇ ಹಸ್ತಕ್ಷೇಪ ಇಲ್ಲದೆ ಅವರು ಕಾರ್ಯನಿರ್ವಹಿಸಲಿದ್ದಾರೆ. ಎಲ್ಲವನ್ನೂ ಕಾನೂನು ಪ್ರಕಾರ ಮಾಡುವಂತೆ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸೂಚಿಸಲಾಗಿದೆ. ಪಾರದರ್ಶಕ ವ್ಯವಸ್ಥೆಯಡಿ ಧೈರ್ಯದಿಂದ ಕೆಲಸ ಮಾಡುವಂತೆ ತಿಳಿಸಲಾಗಿದೆ ಎಂದವರು ಹೇಳಿದರು.

ಈ ಹಿಂದೆಯೂ ಸುಧೀರ್ ರೆಡ್ಡಿಯವರು ಎಸ್ಪಿ ಆಗಿದ್ದಾಗ ಒತ್ತಡದ ಕಾರಣದಿಂದ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಮತ್ತೆ ಆ ಪ್ರವೃತ್ತಿ ನಡೆಯಲಿದೆಯೇ ಎಂಬ ಪ್ರಶ್ನೆಗೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹೊಸ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿದ್ದಾರೆ. ಹಿಂದಿನ ಬಗ್ಗೆ ಇಲ್ಲಿ ಚರ್ಚೆ ಮಾಡುವುದಿಲ್ಲ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪನೆಯಾಗಬೇಕು. ಕೋಮು ಘರ್ಷಣೆ ಕೋಮು ಗಲಭೆ, ದ್ವೇಷ ತಡೆ ಹಿಡಿಯಲು ಶಾಶ್ವತವಾದ ಕಾರ್ಯ ಆಗಬೇಕು ಎಂದವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News