×
Ad

ಬೀಡಿ ಕಾರ್ಮಿಕರ ಸಮಸ್ಯೆ: ಕಾರ್ಮಿಕ ಸಚಿವರೊಂದಿಗೆ ಸಂಘಟನೆಗಳ ಮುಖಂಡರ ಸಭೆ

Update: 2025-11-27 23:45 IST

ಮಂಗಳೂರು: ಬೀಡಿ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಜೊತೆ ಬೀಡಿ ಕಾರ್ಮಿಕ ಸಂಘಟನೆಗಳ ಮುಖಂಡರು ಗುರುವಾರ ವಿಕಾಸ ಸೌಧದಲ್ಲಿ ಸಭೆ ನಡೆಸಿದರು.

2018ರಿಂದ 2024ರವರೆಗಿನ ಬಾಕಿ ಉಳಿಸಿರುವ ವೇತನ ಮತ್ತು 1.4.2024ರಿಂದ ಜಾರಿಯಾಗಬೇಕಿದ್ದ ಸರಕಾರ ಆದೇಶಿರುವ ಕಾನೂನುಬದ್ದ ಕನಿಷ್ಟ ಕೂಲಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಷನ್ (ಸಿಐಟಿಯು) ನೇತೃತ್ವದಲ್ಲಿ ಬೀಡಿ ಕಾರ್ಮಿಕರು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟದ ಬಗ್ಗೆ ಮುಖಂಡರು ಸಚಿವರ ಗಮನ ಸೆಳೆದರು.

ಆಹ್ವಾನದ ಹೊರತಾಗಿಯೂ ಮಾಲಕರ ಸಂಘದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿಲ್ಲ. ಬೀಡಿ ಮಾಲಕರು ಸರಕಾರದ ಆದೇಶ ಜಾರಿಗೊಳಿಸದೆ ಕಾರ್ಮಿಕರಿಗೆ ನಡೆಸಿರುವ ಬಾಕಿ ವೇತನ, ಕನಿಷ್ಟ ಕೂಲಿ ವಂಚನೆಯನ್ನು ಸಚಿವರಿಗೆ ವಿವರಿಸಿರುವುದಾಗಿ ಕಾರ್ಮಿಕರನ್ನು ಪ್ರತಿನಿಧಿಸಿದ್ದ ಸಿಐಟಿಯು ನಾಯಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ತಾವು ನೀಡಿದ ಅಂಕಿ ಅಂಶಗಳ ಮಾಹಿತಿಯನ್ನು ಪಡೆದ ಸಚಿವರು, ಅವುಗಳ ಆಧಾರದಲ್ಲಿ ಬೀಡಿ ಉದ್ಯಮದ ಸಮಗ್ರ ಮಾಹಿತಿಗಳನ್ನು ಕಲೆ ಹಾಕುವಂತೆ, ಮಾಲಕರಿಗೆ ಪತ್ರ ರವಾನಿಸುವಂತೆ, ಡಿಸೆಂಬರ್ ಮಧ್ಯ ಭಾಗದಲ್ಲಿ ಮತ್ತೊಂದು ಸುತ್ತಿನ ಉನ್ನತ ಮಟ್ಟದ ಸಭೆಗೆ ಸಮಯ ನಿಗದಿ ಮಾಡುವಂತೆ ಮತ್ತು ನ.29ರಂದು ಮಂಗಳೂರಿನಲ್ಲಿ ನಡೆಯುವ ಬೀಡಿ ಕಾರ್ಮಿಕರ ಪ್ರತಿಭಟನಾ ಸಭೆಗೆ ತೆರಳಿ ಕಾರ್ಮಿಕರೊಂದಿಗೆ ಮಾತಾಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಸಿಐಟಿಯು ರಾಜ್ಯ ಅಧ್ಯಕ್ಷ ಮೀನಾಕ್ಷಿ ಸುಂದರಂ, ಬೀಡಿ ಕಾರ್ಮಿಕರ ರಾಜ್ಯ ಫೆಡರೇಷನ್ ಅಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಮುಜೀಬ್, ಜಿಲ್ಲಾ ಪ್ರಮುಖರಾದ ಸುಕುಮಾರ್ ತೊಕ್ಕೊಟ್ಟು, ಬಿ.ಎಂ.ಭಟ್, ಮುನೀರ್ ಕಾಟಿಪಳ್ಳ, ಕವಿರಾಜ್ ಕಾಂಚನ್ ಉಡುಪಿ, ಫಾರೂಕ್ ಮಡಂಜೋಡಿ, ಧನಂಜಯ ಪಟ್ರಮೆ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News