ಡ್ರಗ್ಸ್ ದುಷ್ಪರಿಣಾಮಗಳ ರೀಲ್ಸ್, ಕಿರುಚಿತ್ರಗಳ ನಿರ್ಮಾಣಕ್ಕೆ ದ.ಕ. ಜಿಲ್ಲಾಧಿಕಾರಿ ಸೂಚನೆ
ಮಂಗಳೂರು: ಡ್ರಗ್ಸ್ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಕಾಲೇಜುಗಳ ಆಸಕ್ತ ವಿದ್ಯಾರ್ಥಿಗಳಿಂದ ರೀಲ್ಸ್ ಹಾಗೂ ಕಿರು ಚಿತ್ರಗಳನ್ನು ತಯಾರಿಸಲು ಅಗತ್ಯ ಕ್ರಮವಹಿಸುವಂತೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾರ್ಕೋ ಕೋ-ಆರ್ಡಿನೇಷನ್ ಸೆಂಟರ್‌ನ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಲೇಜುಗಳಲ್ಲಿ ಈಗಾಗಲೇ ಡ್ರಗ್ಸ್ ನಿರ್ಮೂಲನಾ ಸಮಿತಿಯನ್ನು ರಚಿಸಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಜಾಥಾ ಸಹಿತ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕಾಲೇಜುಗಳಲ್ಲಿ ಮಾದಕ ದ್ರವ್ಯ ನಿರ್ಮೂಲನೆ ಕುರಿತಂತೆ ಉತ್ತಮ ಸ್ಕ್ರಿಪ್ಟ್ ರಚಿಸಿ ಒಂದು ನಿಮಿಷದೊಳಗೆ ರೀಲ್ಸ್, ಕಿರು ವೀಡಿಯೋಗಳನ್ನು ವಿದ್ಯಾರ್ಥಿಗಳೇ ನಿರ್ಮಿಸಿಕೊಡುವ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ದೇವಿ ಪ್ರಸಾದ್ ಕ್ರಮವಹಿಸಬೇಕು. ಅತ್ಯುತ್ತಮ ರೀಲ್ಸ್ ಹಾಗೂ ಕಿರುಚಿತ್ರಗಳಿಗೆ ಆ.15ರಂದು ಬಹುಮಾನ ಕೊಡಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿರುವ ಡ್ರಗ್ಸ್ ವ್ಯಸನಿಗಳಿಗೆ ಕೌನ್ಸೆಲಿಂಗ್ ಮಾಡಲು ಜಿಲ್ಲಾ ಮಟ್ಟದಲ್ಲಿ ಗುರುತಿಸಲಾದ ಕೌನ್ಸಿಲರನ್ನು ನಿಯೋಜಿಸು ವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್‌ಗೆ ಡಿಸಿ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ. ಮಾತನಾಡಿ ಬೆಳ್ತಂಗಡಿಯ ನೆರಿಯಾದಲ್ಲಿ ಗಾಂಜಾ ಬೆಳೆಯುವ ಪ್ರಕರ ಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯವರು ಪರಿಶೀಲಿಸಿ ವರದಿ ನೀಡಬೇಕು. ಈ ಕುರಿತು ಮಾಹಿತಿ ನೀಡಿದವರಿಗೆ ಬಹುಮಾನ ನೀಡುವ ಬಗ್ಗೆ ಘೋಷಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗೆ ತಿಳಿಸಿದರು.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶುಕುಮಾರ್, ಪುತ್ತೂರು ಡಿವೈಎಸ್‌ಪಿ ಡಾ.ಗಾನಾ ಪಿ.ಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಮತ್ತಿತರರು ಉಪಸ್ಥಿತರಿದ್ದರು.