ಪುತ್ತೂರು | ಆಟೋ ಚಾಲಕನ ಮೇಲೆ ಹಲ್ಲೆ ಆರೋಪ : ಇಬ್ಬರು ಸಂಚಾರ ಪೊಲೀಸರ ಅಮಾನತು
Update: 2025-10-18 15:06 IST
ಪುತ್ತೂರು : ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಸಂಚಾರ ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಅ.17ರಂದು ಸಂಜೆ ಆಟೋ ಚಾಲಕ ಬಶೀರ್ ಕುರಿಯ ಎಂಬವರು ಸಮವಸ್ತ್ರ ಧರಿಸದೆ ಆಟೋ ಚಲಾಯಿಸುತ್ತಿದ್ದಾಗ, ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರ ಠಾಣೆಯ ಎಎಸ್ಐ ಚಿದಾನಂದ ರೈ ಹಾಗೂ ಸಿಪಿಸಿ ಶೈಲ ಎಂ.ಕೆ. ಅವರು ಕೈಸನ್ನೆ ಮೂಲಕ ನಿಲ್ಲಿಸಲು ಸೂಚಿಸಿದ್ದರು. ಆದರೆ ಚಾಲಕ ಆಟೋ ನಿಲ್ಲಿಸದೇ ವೇಗವಾಗಿ ಚಲಾಯಿಸಿದ ಕಾರಣ ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆಯಾಗಿದೆ.
ಈ ವೇಳೆ ಪೊಲೀಸರಿಬ್ಬರೂ ಆತನನ್ನು ಹಿಂಬಾಲಿಸಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ ಎಎಸ್ಐ ಚಿದಾನಂದ ರೈ. ಹಾಗೂ ಸಿಪಿಸಿ ಶೈಲ ಎಂ.ಕೆ. ಅವರನ್ನು ಕರ್ತವ್ಯದಿಂದ ಅಮಾನತು ಮಾಡಿದ್ದಾರೆ.