ಪುತ್ತೂರು | ಕಾಂಗ್ರೆಸ್ ನಾಯಕಿಯ ಮಾನವೀಯ ಸೇವೆ
ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಮಹಾಪೂರ
ಪುತ್ತೂರು : ಪರ್ಪುಂಜ ಅಬ್ರಾಡ್ ಹಾಲ್ ಬಳಿ ನ.1ರಂದು ಸಂಭವಿಸಿದ ಕಾರು ಮತ್ತು ರಿಕ್ಷಾ ನಡುವಿನ ಅಪಘಾತದಲ್ಲಿ ಮಗು ಹಾಗೂ ಮಹಿಳೆ ಮೃತಪಟ್ಟ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಮಹಿಳಾ ನಾಯಕಿಯೊಬ್ಬರು ಮಾಡಿರುವ ಮಾನವೀಯ ಕಾರ್ಯ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ ಅವರು ಘಟನೆ ಬಗ್ಗೆ ಮಾಹಿತಿ ಅರಿತ ಕೂಡಲೇ, ನೇರವಾಗಿ ಮೆಡ್ ಲ್ಯಾಂಡ್ ಆಸ್ಪತ್ರೆಗೆ ಆಗಮಿಸಿ ಅಲ್ಲಿ ದಾಖಲಾಗಿದ್ದ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವ ವಿಷಯದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯಪ್ರವೃತ್ತರಾಗಿದ್ದರು.
ಅಪಘಾತಕ್ಕೀಡಾದ ರಿಕ್ಷಾದಲ್ಲಿ 4 ತಿಂಗಳ ಮಗುವೊಂದು ಗಾಯಗೊಂಡಿದ್ದು, ಆ ಮಗುವಿನ ತಾಯಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಕಾರಣ ಮಗುವಿನ ಆರೈಕೆಯಲ್ಲಿ ತೊಡಗಿದ ಚಂದ್ರಪ್ರಭಾ ಗೌಡ ಅವರು ಮಗುವನ್ನು ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಲ್ಲದೇ ಬಳಿಕ ಇನ್ನೊಂದು ಖಾಸಗಿ ಆಸ್ಪತ್ರೆಗೆ ಹೋಗಿ ಆ ಬಳಿಕ ಮಗುವಿಗೆ ಸಿಟಿ ಸ್ಕ್ಯಾನ್ ಅಗತ್ಯ ಇದ್ದ ಹಿನ್ನೆಲೆಯಲ್ಲಿ ಮಗುವನ್ನು ದರ್ಶನ್ ಕಲಾ ಮಂದಿರ ಬಳಿ ಇರುವ ಸ್ಕ್ಯಾನಿಂಗ್ ಸೆಂಟರ್ ಗೆ ಕೊಂಡು ಹೋಗಿ ಸಿಟಿ ಸ್ಕ್ಯಾನ್ ಮಾಡಿಸಿದ್ದಾರೆ. ಮಾತ್ರವಲ್ಲದೇ ಸಿಟಿ ಸ್ಕ್ಯಾನ್ ಮಾಡಿದ ಫೀಸ್ ನ್ನು ಕೂಡಾ ಅವರೇ ಭರಿಸಿದ್ದಾರೆ ಎಂದು ತಿಳಿದು ಬಂದಿದೆ.