ಅಬ್ದುಲ್ ರಹ್ಮಾನ್ ಹತ್ಯೆ ಪ್ರಕರಣ | ಮೃತದೇಹ ಸಾಗಾಟದ ವೇಳೆ ಫರಂಗಿಪೇಟೆಯಲ್ಲಿ ರಸ್ತೆ ತಡೆ ನಡೆಸಿ ಗುಂಪು ಆಕ್ರೋಶ
ಮಂಗಳೂರು: ನಿನ್ನೆ (ಮೇ 27) ಬಂಟ್ವಾಳದ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಅಬ್ದುಲ್ ರಹ್ಮಾನ್ (34)ರ ಮೃತದೇಹ ಸಾಗಾಟದ ವೇಳೆ ಫರಂಗಿಪೇಟೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಗುಂಪು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿಯೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದು ಇಂದು ಮುಂಜಾನೆ ಕುತ್ತಾರ್ ಮದನಿ ನಗರದ ಮಸೀದಿಯಲ್ಲಿ ಮಯ್ಯತ್ ಸ್ನಾನ ನಿರ್ವಹಿಸಲಾಯಿತು. ಮಯ್ಯತ್ ನಮಾಝ್ ಬಳಿಕ ಅಲ್ಲಿಂದ ಪೊಲೀಸ್ ಬಂದೋಬಸ್ತ್ ನಲ್ಲಿ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಕೊಂಡೊಯ್ಯಲಾಯಿತು. ನೂರಾರು ಮಂದಿ ವಾಹನಗಳಲ್ಲಿ ಆಂಬುಲೆನ್ಸ್ ಜೊತೆ ಸಾಗುತ್ತಿದ್ದಾರೆ. ಮೃತದೇಹವು ಕುತ್ತಾರ್ , ತೊಕ್ಕೊಟ್ಟು, ಪಂಪ್ ವೆಲ್ ಮಾರ್ಗವಾಗಿ ಫರಂಗಿಪೇಟೆ ತಲುಪಿದಾಗ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರ ಗುಂಪು ರಸ್ತೆ ತಡೆ ನಡೆಸಿ ಹತ್ಯೆಯನ್ನು ಖಂಡಿಸಿದರು.
ರಹ್ಮಾನ್ ಪರ ಘೋಷಣೆಗಳನ್ನು ಕೂಗಿದ ಆಕ್ರೋಶಿತ ಗುಂಪು ಸರಕಾರದ ವಿರುದ್ಧ ಘೋಷಣೆ ಕೂಗಿತು. ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿತು.
ಆಕ್ರೋಶಿತ ಗುಂಪನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಬಳಿಕ ಪೊಲೀಸರು ಆಕ್ರೋಶಿತರನ್ನು ಸಮಾಧಾನಪಡಿಸಿ ಗುಂಪನ್ನು ಚದುರಿಸಿ ಆಂಬುಲೆನ್ಸ್ ಮುಂದೆ ಸಾಗಲು ಅನುವು ಮಾಡಿಕೊಟ್ಟರು. ಮೃತದೇಹವನ್ನು ರಹ್ಮಾನ್ ರ ಬಂಟ್ವಾಳ ತಾಲೂಕಿನ ಕೊಳತ್ತಮಜಲಿನಲ್ಲಿರುವ ಮನೆಗೆ ಕೊಂಡೊಯ್ಯಲಾಗುತ್ತಿದೆ.
ಮಂಗಳವಾರ ಮಧ್ಯಾಹ್ನ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಪಿಕಪ್ ವಾಹನದಲ್ಲಿ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಅಬ್ದುಲ್ ರಹ್ಮಾನ್ ಮತ್ತು ಕಲಂದರ್ ಶಾಫಿ ಎಂಬವರ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಯುಧಗಳಿಂದ ಮಾರಣಾಂತಿಕ ದಾಳಿ ನಡೆಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಬ್ದುಲ್ ರಹ್ಮಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಕಲಂದರ್ ಶಾಫಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮಧ್ಯೆ ಹತ್ಯೆ ಮತ್ತು ಹತ್ಯೆ ಯತ್ನಕ್ಕೆ ಸಂಬಂಧಿಸಿ ಸ್ಥಳೀಯರಾದ ದೀಪಕ್, ಸಮೀತ್ ಎಂಬ ಇಬ್ಬರು ಸೇರಿ 15 ಮಂದಿಯ ವಿರುದ್ಧ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.