ದ.ಕ. ಜಿಲ್ಲೆಯಲ್ಲಿ ಮುಂದುವರಿದ ಮಳೆ
ಮಂಗಳೂರು, ಜೂ.15: ದ.ಕ. ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಮಳೆಯೊಂದಿಗೆ ಅಲ್ಲಲ್ಲಿ ಅನಾಹುತ ಸಂಭವಿಸಿರುವುದು ವರದಿಯಾಗಿದೆ. ಶನಿವಾರ ಅಲ್ಲಲ್ಲಿ ಗುಡ್ಡ ಕುಸಿತ, ಆವರಣಗೋಡೆ ಕುಸಿದು ರಸ್ತೆಗಳಿಗೆ ಬಿದ್ದ ಪರಿಣಾಮವಾಗಿ ರಸ್ತೆಗಳು ಬಂದ್ ಆಗಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಮೂರು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ನಿನ್ನೆ ಮಳೆಯಿಂದಾಗಿ ಮಂಗಳೂರು ನಗರದ ಬಹುಭಾಗ ಜಲಾವೃತಗೊಂಡಿತ್ತು. ಹಲವೆಡೆ ಮನೆಗಳಿಗೆ ನೀರು ನುಗ್ಗಿತ್ತು. ಇಂದು ಕೂಡಾ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.
ಪಾಂಡೇಶ್ವರದ ಶಿವನಗರದ ನಾಲ್ಕನೇ ಕ್ರಾಸ್ ಬಳಿಯ ಪ್ರದೇಶ ಮಳೆಯಿಂದ ಜಲಾವೃತಗೊಂಡಿದ್ದು, ಹಲವು ಮನೆಗಳಿಗೆ ನೆರೆ ನೀರು ನುಗ್ಗಿದೆ. ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಅವಕಾಶವಿಲ್ಲದಾಗಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಪುದುವಿನಲ್ಲಿ ಗರಿಷ್ಠ ಮಳೆ: ಜೂ.14 ಬೆಳಗ್ಗೆ 8:30ರಿಂದ ಜೂ.15 ಬೆಳಗ್ಗೆ 8:30 ಗಂಟೆಯ ತನಕ ದ.ಕ. ಜಿಲ್ಲೆಯಲ್ಲಿ 244.4 ಮಿ.ಮೀ ಮಳೆಯಾಗಿದೆ. ಬಂಟ್ವಾಳ ತಾಲೂಕಿನ ಪುದುವಿನಲ್ಲಿ ಗರಿಷ್ಠ 189.5 ಮಿ.ಮೀ ಮಳೆಯಾಗಿದೆ. ಪುತ್ತೂರಿನ ಕೆದಂಬಾಡಿಯಲ್ಲಿ ಕನಿಷ್ಠ 40.5 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ.
ಕಂಕನಾಡಿ ಫಾದರ್ ಮುಲ್ಲರ್ ಸಂಸ್ಥೆಯ ಆವರಣ ಗೋಡೆ ಶನಿವಾರ ಸಂಜೆ ಕುಸಿದು ಸುವರ್ಣ ಲೈನ್ ರಸ್ತೆಗೆ ಬಿದ್ದ ಪರಿಣಾಮವಾಗಿ, ಆ ರಸ್ತೆ ಬಂದ್ ಆಗಿದ್ದು, ಸುವರ್ಣ ಲೈನ್ ನಾಲ್ಕನೇ ಅಡ್ಡರಸ್ತೆ ಬಳಿ ಈ ಘಟನೆ ಸಂಭವಿಸಿದೆ. ರಸ್ತೆಗೆ ಬಿದ್ದಿರುವ ಕಲ್ಲುಗಳನ್ನು ತೆರವುಗೊಳಿಸುವ ಕಾರ್ಯ ತಕ್ಷಣ ಕೈಗೊಳ್ಳಲಾಗಿದ್ದರೂ, ಎಲ್ಲ ಕಲ್ಲುಗಳನ್ನು ತೆರವುಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ರಸ್ತೆಯ ಪಕ್ಕದ ವಿದ್ಯುತ್ ಕಂಬದ ಮೇಲೆ ಆವರಣಗೋಡೆ ಬಿದ್ದ ಪರಿಣಾಮವಾಗಿ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಇದರಿಂದಾಗಿ ಈ ಭಾಗದ ಜನರು ವಿದ್ಯುತ್ ಸಂಪರ್ಕ ಇಲ್ಲದೆ ಪರದಾಡುವಂತಾಗಿದೆ. ನಿನ್ನೆ ಸಂಜೆಯಿಂದಲೇ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿದು ಹೋಗಿದೆ. ಮೆಸ್ಕಾಂ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರೂ, ಮುರಿದು ಬಿದ್ದ ವಿದ್ಯುತ್ ಕಂಬವನ್ನು ತೆರವುಗೊಳಿಸಿ ಮತ್ತೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಕಾರ್ಯ ಇಂದು ಮಧ್ಯಾಹ್ನದ ತನಕವೂ ಆಗಿಲ್ಲ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.