×
Ad

ಸಿಎಂ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಶ್ರಮಿಸಿದ್ದಾರೆ: ರಮಾನಾಥ ರೈ

Update: 2026-01-08 16:26 IST

ಮಂಗಳೂರು, ಜ.8: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವನಿ ಇಲ್ಲದವರ ಧ್ವನಿಯಾಗಿ, ಹಿಂದುಳಿದ ವರ್ಗದ ಮುಖಂಡನಾಗಿ ಸಾಮಾಜಿಕ ನ್ಯಾಯ ವಂಚಿತವರಿಗೆ ನ್ಯಾಯ ಒದಗಿಸುವಲ್ಲಿ ವಿಶೇಷ ಕಾಳಜಿ ವಹಿಸಿ ಶ್ರಮಿಸಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶೋಷಿತ ವರ್ಗದ ಧ್ವನಿಯಾಗಿ ಬಸವಣ್ಣನವರ ಸೈದ್ಧಾಂತಿಕ ನಿಲುವನ್ನು ಜೀವನದಲ್ಲಿ ಅಳವಡಿಸಿಕೊಂಡು ರಾಜ್ಯದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಸಿದ್ದರಾಮಯ್ಯ ಸುದೀರ್ಘ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿ ಅವರ ದಾರಿಯಲ್ಲೇ ಮುನ್ನಡೆಯುತ್ತಿರುವುದು ಸಂತಸದ ವಿಚಾರ ಎಂದರು.

ಒಂದೊಮ್ಮೆ ತಮಗೆ ಸಿದ್ದರಾಮಯ್ಯರ ಸಚಿವ ಸಂಪುಟದಲ್ಲಿ ಸಚಿವನಾಗಿ ಕಾರ್ಯ ನಿರ್ವಹಿಸುವ ಮತ್ತು ಅವರ ಕಾರ್ಯವೈಖರಿಯನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತ್ತು. ಆ ಅವಧಿಯಲ್ಲಿ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ ಶೇ.95ರಷ್ಟನ್ನು ಈಡೇರಿಸಿದ್ದರು ಎಂದು ನೆನಪಿಸಿಕೊಂಡರು.

ಆಹಾರ ಭದ್ರತಾ ಕಾಯ್ದೆಯನ್ನು ಮೊದಲ ಬಾರಿ ಅನುಷ್ಠಾನಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದಾರೆ. ಅಭಿವೃದ್ಧಿ ಕಾಮಗಾರಿಯ ಗುತ್ತಿಗೆ ನಿರ್ವಹಿಸಿದ ಕಂಟ್ರಾಕ್ಟರ್ ಗಳಿಗೆ ಬಿಲ್ ಬಾಕಿ ಉಳಿಸಿಕೊಂಡವರಲ್ಲ. ಗುತ್ತಿಗೆಯಲ್ಲೂ ಮೀಸಲಾತಿ ನೀಡಿದವರು ಸಿದ್ದರಾಮಯ್ಯ ಎಂದರು.

ಅನ್ನಭಾಗ್ಯ, ವಿದ್ಯಾಸಿರಿ, ಗುತ್ತಿಗೆಯಲ್ಲಿ ಮೀಸಲಾತಿ ಇವೆಲ್ಲಿ ಕ್ರಾಂತಿಕಾರಿ ಹೆಜ್ಜೆಗಳಾಗಿವೆ. ನಿಗಮಗಳ, ಗ್ರಾಮ ಪಂಚಾಯತ್ ಸಾಲಮನ್ನಾ, ರೈತರ ಸಾಲ ಮನ್ನಾ ಯೋಜನೆ ಅನುಷ್ಠಾನ, ಎತ್ತಿನಹೊಳೆ ಯೋಜನೆ, ಪಶ್ಚಿಮ ವಾಹಿನಿ ಯೋಜನೆ, ಮಿನಿ ವಿಧಾನ ಸೌಧಗಳು, ಪ್ರಜಾಸೌಧ, ಅಂಬೇಡ್ಕರ್ ಭವನ ನಿರ್ಮಾಣ ಸಿದ್ದರಾಮಯ್ಯನವರ ಸಾಧನೆಯಾಗಿದೆ ಎಂದು ರೈ ಹಿಂದಿನ ಅವಧಿಯ ಸರಕಾರದ ಸಾಧನೆಗಳ ಪಟ್ಟಿಯನ್ನು ತೆರದಿಟ್ಟರು.

ಸಿದ್ದರಾಮಯ್ಯರ ಹಿಂದಿನ ಅವಧಿಯ ಸಾಧನೆ ‘ದಿ ಬೆಸ್ಟ್’ ಆಗಿತ್ತು. ಈಗಿನ ಅವಧಿಯಲ್ಲಿ ಪಂಚ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾರೆ ಎಂದು ರಮಾನಾಥ ರೈ ಹೇಳಿದರು.

ರಾಜ್ಯದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ವಿಳಂಬ ವಿಚಾರದ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ, ಹೌದು ತಡವಾಗಿದೆ. ‘ಬಸ್ ಮಿಸ್ಸ್ ಆಗಿದೆ’ ಹಿಂದಿನ ಬಿಜೆಪಿ ಸರಕಾರ ಸಕಾಲದಲ್ಲಿ ಚುನಾವಣೆ ಮಾಡಬೇಕಿತ್ತು. ಅವರು ಮಾಡಿರುವ ತಪ್ಪಿನಿಂದಾಗಿ ಈಗ ಸಮಸ್ಯೆ ಆಗಿದೆ ಎಂದು ನುಡಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎಸ್.ಅಪ್ಪಿ, ಪದ್ಮನಾಭ ಕೋಟ್ಯಾನ್, ಚಿತ್ತರಂಜನ್ ಶೆಟ್ಟಿ, ದಿನೇಶ್ ಮೂಳೂರು, ಅಬ್ಬಾಸ್ ಅಲಿ, ದಿನೇಶ್ ಮೂಳೂರು, ನಿತ್ಯಾನಂದ ಶೆಟ್ಟಿ, ಇಬ್ರಾಹೀಂ ನವಾಝ್, ಟಿ.ಕೆ. ಸುಧೀರ್, ಸುದರ್ಶನ್ ಜೈನ್, ವಿಕಾಸ್ ಶೆಟ್ಟಿ, ಯೋಗೀಶ್ ಕುಮಾರ್, ಶಬೀರ್ ಸಿದ್ದಕಟ್ಟೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News