×
Ad

ಜ.10-11: ಮಂಗಳೂರು ಲಿಟ್ ಫೆಸ್ಟ್

Update: 2026-01-08 21:53 IST

ಮಂಗಳೂರು, ಜ.8: ಮಂಗಳೂರು ಲಿಟ್ ಫೆಸ್ಟ್ ಜ.10 ಮತ್ತು ಜ.11ರಂದು ಡಾ. ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಭಾರತ್ ಫೌಂಡೇಷನ್‌ನ ಟ್ರಸ್ಟಿ ಸುನೀಲ್ ಕುಲಕರ್ಣಿ ತಿಳಿಸಿದ್ದಾರೆ.

ಮಂಗಳೂರಿನ ಓಶಿಯನ್ ಪರ್ಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಮಂಗಳೂರು ಲಿಟ್ ಫೆಸ್ಟ್ ನ 2026ನೇ ಆವೃತ್ತಿಯ ವಿಶೇಷ ಪ್ರಶಸ್ತಿಗೆ ಪದ್ಮಶ್ರೀ ಪುರಸ್ಕೃತ ಖ್ಯಾತ ಇತಿಹಾಸಕಾರ್ತಿ, ರಾಜ್ಯಸಭಾ ಸದಸ್ಯೆ ಮೀನಾಕ್ಷಿ ಜೈನ್ ಆಯ್ಕೆಯಾಗಿದ್ದಾರೆ. ಜ.10ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಗುಪ್ತಚರ ಸಂಸ್ಥೆ ರಾ ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್, ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಮಹಿಳಾ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅಂಬಾಸಿಡರ್ ರುಚಿರಾ ಕಾಂಬೋಜ್, ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅಂಬಾಸಿಡರ್ ಟಿ.ಎಸ್. ತಿರುಮೂರ್ತಿ , ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಿಥಿಕ್ ಸೊಸೈಟಿಯ ರವಿ. ಎಸ್ ಸೇರಿದಂತೆ 65ಕ್ಕೂ ಹೆಚ್ಚು ಚಿಂತಕರು ಲಿಟ್ ಫೆಸ್ಟ್ ನಲ್ಲಿ ಭಾಗವಹಿಸಲಿದ್ದಾರೆ.

ಪದ್ಮಭೂಷಣ ಎಸ್.ಎಲ್. ಭೈರಪ್ಪ ಗೌರವಾರ್ಥ ಶತಾವಧಾನಿ ಆರ್ ಗಣೇಶ್ ಮತ್ತು ಜಿ.ಬಿ. ಹರೀಶರಿಂದ ವಿಶೇಷ ಗೋಷ್ಠಿ ನಡೆಯಲಿದೆ.

ಲಿಟ್ ಫೆಸ್ಟ್‌ನಲ್ಲಿ ವಿಕ್ರಂ ಸೂದ್ ಮತ್ತು ಡಾ. ಶ್ರೀಪರ್ಣಾ ಪಾಠಕ್ ವಿಶ್ವ ಮಟ್ಟದ ಪವರ್ ಗೇಮ್ ವಿಚಾರವಾಗಿ ಸಂವಾದ ನಡೆಸಲಿದ್ದಾರೆ. ರುಚಿರಾ ಕಾಂಬೋಜ್, ಡಾ. ಸ್ವಸ್ತಿ ರಾವ್, ಪತ್ರಕರ್ತ ಆದಿತ್ಯರಾಜ್ ಕೌಲ್ ಮತ್ತು ಡಾ. ಬಿಡಂದ ಚೆಂಗಪ್ಪ ಅವರು ಭಾರತದ ನೆರೆಹೊರೆಯ ಸಂಬಂಧಗಳ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ತಿರುಮೂರ್ತಿ, ಡಾ. ಶ್ರೀರಾಮ್ ಚೌಲಿಯಾ, ವಿಜಿತ್ ಕನಹಳ್ಳಿ ಜಾಗತೀಕರಣಗೊಂಡ ವಿಶ್ವದಲ್ಲಿ ಭಾರತೀಯ ಚಿಂತನೆ ಎಂಬ ವಿಚಾರದ ಕುರಿತು ಮಾತನಾಡಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ದಿಗ್ಗಜರಾದ ಶತಾವಧಾನಿ ಡಾ. ಆರ್ ಗಣೇಶ್, ಡಾ. ಅಜಕ್ಕಳ ಗಿರೀಶ ಭಟ್ ಅವರು ಸಾಹಿತ್ಯದ ಮುಖಾಂತರ ಮೌಲ್ಯಗಳ ಅಣ್ವೇಷಣೆ ಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಎಎನ್‌ಐ ಸಂಪಾದಕೀಯ ನಿರ್ದೇಶಕರಾದ ಸ್ಮಿತಾ ಪ್ರಕಾಶ್, ಪದ್ಮಜಾ ಜೋಶಿ ಮತ್ತು ಸುರಭಿ ಹೊದಿಗೆರೆ ಅವರು ಸಾರ್ವಜನಿಕ ಕ್ಷೇತ್ರವನ್ನು ಡಿಜಿಟಲ್ ಸುದ್ದಿಗಳು ಹೇಗೆ ರೂಪಿಸುತ್ತಿವೆ ಎಂಬುದರ ಕುರಿತು ಚರ್ಚಿಸಲಿದ್ದಾರೆ. ಚಿತ್ರ ಮತ್ತು ಚಿಂತನೆ ಗೋಷ್ಠಿಯಲ್ಲಿ ಪಿ. ಶೇಷಾದ್ರಿ, ಮಾಳವಿಕಾ ಅವಿನಾಶ್ ಮತ್ತು ಪಲ್ಲವಿ ರಾವ್ ಕಾರಂತ್ ಭಾಗವಹಿಸಲಿ ದ್ದಾರೆ. ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಬದುಕುಳಿದವರು ಕಂಡಂತೆ ಪುಸ್ತಕ ಸಂವಾದವನ್ನು ಶ್ರೀಕಾಂತ್ ಶೆಟ್ಟಿ ಕಾರ್ಕಳ ನಡೆಸಿಕೊಡಲಿದ್ದಾರೆ. ಕಲ್ಪನೆ, ಕಥನ ಮತ್ತು ಕ್ಯಾಮರಾ ಗೋಷ್ಠಿಯಲ್ಲಿ ಖ್ಯಾತ ನಟಿ ರಂಜನಿ ರಾಘವನ್, ಸು ಫ್ರಂ ಸೋ ಖ್ಯಾತಿಯ ಪೂರ್ಣಿಮಾ ಸುರೇಶ್ ಮತ್ತು ಲೇಖಕಿ ಸೀಮಾ ಬುರುಡೆ ಅವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಉಜ್ವಲಾ ಕೃಷ್ಣರಾಜ್ ಅವರಿಂದ ಬೊಂಬೆಯಾಟ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶಾವಕಾಶ ಲಭ್ಯವಿದೆ. ವಿಶೇಷವಾಗಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸ ಲಾಗಿದ್ದು, ಇಲ್ಲಿ ಅನೇಕ ಆಕರ್ಷಕ ವಿಭಾಗಗಳನ್ನು ರೂಪಿಸಲಾಗಿದೆ ಎಂದು ಸುನೀಲ್ ಕುಲಕರ್ಣಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾರತ್ ಫೌಂಡೇಷನ್‌ನ ಸದಸ್ಯರಾದ ರಾಮದಾಸ್ ಕಟೀಲ್, ಸುಜಿತ್ ಪ್ರತಾಪ್ ಮಂಗಲ್ಪಾಡಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News