ಹರೇಕಳ: ಭೂ ರಹಿತ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಲು ತಹಶೀಲ್ದಾರರಿಗೆ ಮನವಿ
ಹರೇಕಳ, ಜ. 22: ಉಳ್ಳಾಲ ತಾಲೂಕು ಕಚೇರಿಯಲ್ಲಿ ತಹಶೀಲ್ದಾರರಾದ ಪುಟ್ಟುರಾಜುರನ್ನು ಭೇಟಿಯಾದ SDPI ಹರೇಕಳ ನಿಯೋಗದ ವತಿಯಿಂದ ಭೂ ರಹಿತ ಫಲಾನುಭವಿಗಳ ಪಟ್ಟಿಯನ್ನು ಶೀಘ್ರದಲ್ಲಿ ಅಂತಿಮಗೊಳಿಸಲು ಕೋರಿ ಮನವಿಯನ್ನು ಸಲ್ಲಿಸಲಾಯಿತು.
ಹರೇಕಳ ಪಂಚಾಯತ್ ನಿಂದ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿ ಒಂದು ತಿಂಗಳು ಕಳೆದರೂ ಯಾವುದೇ ಪ್ರಗತಿ ಕಾಣದ ಹಿನ್ನಲೆಯಲ್ಲಿ ಪಟ್ಟಿಯನ್ನು ಸಿದ್ಧಪಡಿಸಲು ಒಂದು ವಾರದ ಗಡುವನ್ನು ನೀಡಿ, ವಿಳಂಬ ಧೋರಣೆ ಅನುಸರಿಸಿದರೆ ಫಲಾನುಭವಿಗಳನ್ನು ಸಂಘಟಿಸಿ ತಾಲೂಕು ಕಚೇರಿ ಮುಂಭಾಗ ಹೋರಾಟ ನಡೆಸುವ ಎಚ್ಚರಿಕೆಯನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಹರೇಕಳ ಗ್ರಾಮ ಪಂಚಾಯತ್ ಅಧೀನದಲ್ಲಿ ಗ್ರಾಮದ ಭೂ ರಹಿತ ಫಲಾನುಭವಿಗಳಿಗೆ ನಿವೇಶನ ಭೂಮಿ ಮಂಜೂರಾತಿಗೊಂಡು ವರ್ಷಗಳೇ ಕಳೆದರೂ, ಇನ್ನು ಕೂಡ ನಿವೇಶನ ಭೂಮಿ ಅರ್ಹರಿಗೆ ಹಂಚಿಕೆಯಾದ ಹಿನ್ನೆಲೆಯಲ್ಲಿ ಮಂಗಳವಾರ ಹರೇಕಳ ಪಂಚಾಯತ್ ಗೆ ಭೇಟಿ ನೀಡಿದ SDPI ನಿಯೋಗ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಪ್ರಶ್ನಿಸಿದೆ. ಈ ವೇಳೆ ಪಂಚಾಯತ್ ಮಟ್ಟದಲ್ಲಿ ನಿವೇಶನ ಭೂಮಿ ಹಂಚಿಕೆ ಸಂಬಂಧಿಸಿರುವ ಕೆಲಸ ಕಾರ್ಯ ಬಹುತೇಕ ಮುಗಿದಿದ್ದು, ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ ತಹಶೀಲ್ದಾರರ ಕಚೇರಿಗೆ ಡಿಸೆಂಬರ್ ತಿಂಗಳಲ್ಲಿ ಮುಟ್ಟಿಸಲಾಗಿರುತ್ತದೆ ಎಂಬ ಮಾಹಿತಿ ನೀಡಿದ್ದರು.
SDPI ನಿಯೋಗದಲ್ಲಿ SDPI ಕ್ಷೇತ್ರ ಸಮಿತಿ ಅಧ್ಯಕ್ಷರು ಮತ್ತು ಹರೇಕಳ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಬಶೀರ್, ಬ್ಲಾಕ್ ಸಮಿತಿ ಸದಸ್ಯರಾದ ಇಬ್ರಾಹಿಂ ಮತ್ತು ಹರೇಕಳ ಗ್ರಾಮ ಸಮಿತಿ ಕಾರ್ಯದರ್ಶಿ ಮುಬಾರಕ್ ಜೊತೆಗಿದ್ದರು.