×
Ad

ಮಳೆ ಹಾನಿಗೆ ತಕ್ಷಣ ಸ್ಪಂದಿಸಿ: ಜಿಲ್ಲಾಡಳಿತಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ

Update: 2025-05-26 19:55 IST

ದಿನೇಶ್ ಗುಂಡೂರಾವ್

ಮಂಗಳೂರು: ದ.ಕ. ಜಿಲ್ಲೆ ಹಾಗೂ ಮಂಗಳೂರು ನಗರ ಪ್ರದೇಶದಲ್ಲಿ ಮಳೆಹಾನಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದ.ಕ.ಜಿಲ್ಲಾಡಳಿತ ಹಾಗೂ ಪಾಲಿಕೆ ಆಯುಕ್ತರೊಂದಿಗೆ ಸೋಮವಾರ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಚಿವರು ಸಂಬಂಧಪಟ್ಟ ಅಧಿಕಾರಿಗಳು ತಾಲೂಕು ಕೇಂದ್ರ ಸ್ಥಳಗಳಲ್ಲಿರಬೇಕು. ನಗರದಲ್ಲಿ ಮನೆಗಳಲ್ಲಿ ನೀರು ನುಗ್ಗುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಬೇಕು. ಭಾರೀ ಗಾಳಿಗೆ ಮರಗಳು ರಸ್ತೆ, ಮನೆಗಳ ಮೇಲೆ ಬಿದ್ದಾಗ ತಕ್ಷಣ ಸ್ಪಂದಿಸಿ ತೆರವು ಕಾರ್ಯಾಚಣೆ ಕೈಗೊಳ್ಳಬೇಕು ಎಂದರು.

ವಾಸ್ತವ್ಯದ ಮನೆಯ ಸಮೀಪ ಹಲವು ಪ್ರದೇಶಗಳಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು ಈ ಕುರಿತು ಎಚ್ಚರ ವಹಿಸಬೇಕು. ಇಂತಹ ಅಪಾಯದ ಪ್ರದೇಶದಲ್ಲಿರುವ ಮನೆಗಳಿಂದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಬೇಕು. ಸುರಕ್ಷಿತವಲ್ಲದ ಅಂಗನವಾಡಿ ಶಾಲಾ ಕಟ್ಟಡದ ಕುರಿತು ಎಚ್ಚರ ವಹಿಸಬೇಕು. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳು ನಡೆಯುವ ಪ್ರದೇಶದಲ್ಲಿ ಮಳೆ ನೀರು ತಗ್ಗಿನಲ್ಲಿರುವ ವಸತಿ ಪ್ರದೇಶಕ್ಕೆ ಹರಿದು ಬರುತ್ತಿದೆ. ತಕ್ಷಣ ಇದನ್ನು ಸರಿಪಡಿಸಬೇಕು. ಪಂಪ್‌ವೆಲ್ ಜಂಕ್ಷನ್‌ನಂತಹ ಕೆಲವು ಕಡೆ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿಯೇ ನಿಂತು ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದ್ದು ತಕ್ಷಣ ಸರಿಪಡಿಸಬೇಕು ಎಂದು ಸಚಿವರು ಸೂಚಿಸಿದರು.

ಗಾಳಿ ಮಳೆಗೆ ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ಬೀಳುತ್ತಿದೆ. ಇಂತಹ ಸಂದರ್ಭ ತಂತಿಯಲ್ಲಿ ವಿದ್ಯುತ್ ಪ್ರವಹಿಸಿ ಅಪಾಯ ಉಂಟಾಗದಂತೆ ಎಚ್ಚರ ವಹಿಸಬೇಕು. ನದಿತಟದಲ್ಲಿರುವ ಜನವಸತಿ ಪ್ರದೇಶಕ್ಕೆ ನೀರು ನುಗ್ಗುವ ಸಂದರ್ಭ ಎದುರಾಗಿದೆ. ಇಂತಹ ಅಪಾಯ ಪ್ರದೇಶದಲ್ಲಿನ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವುದು ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಆವರಣವಿಲ್ಲದ ಕೆಂಪು ಕಲ್ಲಿನ ಕೋರೆ, ಕೆರೆಗಳು, ನದಿಯಲ್ಲಿ ಈಜಲು ತೆರಳದಂತೆ ಎಚ್ಚರವಹಿಸಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.

ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗೆ ಮರ ಬೀಳುವುದು, ಆವರಣ ಗೋಡೆ ಕುಸಿಯುವುದು, ವಿದ್ಯುತ್ ಕಂಬಕ್ಕೆ ಹಾನಿ, ಅಂಗಡಿಗಳಿಗೆ ನೀರು ನುಗ್ಗುವುದು, ರಸ್ತೆಗೆ ಹಾನಿ ಸಂಭವಿಸಿರುವ ಬಗ್ಗೆ ಮಾಹಿತಿ ಬಂದಿದ್ದು, ತಕ್ಷಣ ತುರ್ತು ಕ್ರಮ ಕೈಗೊಳ್ಳಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News