×
Ad

ಸಜಿಪಮುನ್ನೂರು: ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯನಿಂದ ಸ್ಮಶಾನ ಭೂಮಿ ಅತಿಕ್ರಮಣ; ಕಂದಾಯ ಸಚಿವರಿಗೆ ಮನವಿ

Update: 2023-08-30 19:07 IST

ಬಂಟ್ವಾಳ : ಸಜಿಪಮುನ್ನೂರು ಗ್ರಾಮದಲ್ಲಿ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯನಿಂದಲೇ ಅತಿಕ್ರಮಣಗೊಂಡಿರುವ ಸಾರ್ವಜನಿಕ ಹಿಂದೂ ರುದ್ರಭೂಮಿಯ ಜಮೀನು ತೆರವುಗೊಳಿಸಿ ತಕ್ಷಣ ಸ್ಮಶಾನ ನಿರ್ಮಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಜಿಪ ಮುನ್ನೂರು ಕ್ಷೇತ್ರದ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ನೇತೃತ್ವದ ನಿಯೋಗ ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸಜಿಪಮುನ್ನೂರು ಗ್ರಾಮದಲ್ಲಿ ಸ್ಮಶಾನ ನಿರ್ಮಿಸುವಂತೆ ಸಜಿಪಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ, 6ನೇ ವಾರ್ಡಿನ ಆಲಾಡಿ-ಶಾರದಾ ನಗರದಲ್ಲಿ ಸಜಿಪಮುನ್ನೂರು ಗ್ರಾಮದ ಸರ್ವೆ ನಂಬ್ರ 29/1 ರ 0.50 ಎಕ್ರೆ ಜಮೀನನ್ನು 1994-95ರಲ್ಲೇ ಕಮಿಷನರ್ ಆದೇಶ ಸಂಖ್ಯೆ ಎಲ್ ಎನ್ ಡಿ ಸಿ ಆರ್ 153/94-95ರಂತೆ ಸಾರ್ವಜನಿಕ ಸ್ಮಶಾನಕ್ಕೆ ಮೀಸಲಾಗಿಡಲಾಗಿದೆ. ಸದ್ರಿ ಸ್ಮಶಾನ ಜಾಗದಲ್ಲಿ ಇನ್ನೂ ಸ್ಮಶಾನ ನಿರ್ಮಾಣ ಆಗಿಲ್ಲ ಮಾತ್ರವಲ್ಲ ಸದ್ರಿ ಮೀಸಲು ಜಮೀನನ್ನು ಪಂಚಾಯತಿನ ಸದಸ್ಯರೇ ಅಕ್ರಮವಾಗಿ ಕಬಳಿಸಿ ಕೃಷಿ ಮಾಡಿಕೊಂಡು ಫಸಲಿನ ಲಾಭವನ್ನು ವೈಯುಕ್ತಿಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಳೆದ ಗ್ರಾಮಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಆಕ್ರಮಿತ ಜಮೀನನ್ನು ವಶಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರ ಪರವಾಗಿ ಆಗ್ರಹಿಸಲಾಗಿತ್ತು. ಬಳಿಕ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಬಂಟ್ವಾಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಸ್ಮಶಾನ ಭೂಮಿ ಕಬಳಿಸಿದ ಬಗ್ಗೆ ಗಮನ ಸೆಳೆಯಲಾಗಿದೆ. ಅಲ್ಲದೆ ಬಂಟ್ವಾಳ ತಾಲೂಕಿನಲ್ಲೇ ಹಿಂದೂ ರುದ್ರ ಭೂಮಿ ಇಲ್ಲದ ಗ್ರಾಮ ಸಜಿಪಮುನ್ನೂರು ಆಗಿರುವುದರಿಂದ ತಕ್ಷಣ ಗ್ರಾಮದಲ್ಲಿ ಸ್ಮಶಾನ ನಿಮಾಣ ಮಾಡುವಂತೆ ಆಗ್ರಹಿಸಲಾಗಿತ್ತು. ಆದರೂ ಇನ್ನೂ ಈ ಬಗ್ಗೆ ಕ್ರಮ ಜರುಗಿಲ್ಲ. ಕಂದಾಯ ಸಚಿವರು ಈ ಬಗ್ಗೆ ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಚಂದ್ರಪ್ರಕಾಶ್ ಶೆಟ್ಟಿ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ.

ಮನವಿ ಸ್ವೀಕರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರತಿಕ್ರಯಿಸಿ ಇಂದಿನ ಪ್ರಗತಿ ಪರಿಶೀಲನಾ ಸಭೆಯಲ್ಲೇ ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಜಿಲ್ಲಾಧಿಕಾರಿ ಜೊತೆಯೂ ಮಾತುಕತೆ ನಡೆಸಿ ತಮ್ಮ ಮನವಿ ಹಾಗೂ ಸಲಹೆಗಳ ಬಗ್ಗೆ ಸೂಕ್ತ ಕ್ರಮಕ್ಕೆ ಸೂಚಿಸಲಾಗುವುದು ಎಂದಿದ್ದಾರೆ.

ನಿಯೋಗದಲ್ಲಿ ಸಜಿಪ ಮುನ್ನೂರು, ಶಾರದಾನಗರ ಹಿಂದೂ ರುದ್ರ ಭೂಮಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಸಜಿಪ ಮುನ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ ಮೊದಲಾದವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News