×
Ad

ಮಂಗಳೂರು: ಸಮನ್ವಯ ಶಿಕ್ಷಕ ಪ್ರಶಸ್ತಿಗೆ ಮೆಲ್ಕಾರ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಮಜೀದ್ ಆಯ್ಕೆ

Update: 2025-11-06 21:54 IST

ಮಂಗಳೂರು: ಸಮನ್ವಯ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಇದರ ವತಿಯಿಂದ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಕ್ರಿಯಾಶೀಲ ಶಿಕ್ಷಕರಿಗೆ ಕೊಡ ಮಾಡುವ‌ ಮೂರನೇ ಆವೃತ್ತಿಯ ಸಮನ್ವಯ ಶಿಕ್ಷಕ ಪ್ರಶಸ್ತಿ - 2025ಗೆ ಮೆಲ್ಕಾರ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಮಜೀದ್ ಎಸ್ ಆಯ್ಕೆಯಾಗಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಅಕ್ಬರ್ ಅಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಪೇರಿಮಾರ್ ನಿವಾಸಿಯಾದ ಇವರು ದಿವಂಗತ ಕೆ.ಮೊಹಮ್ಮದ್ ಮತ್ತು ನಫೀಸಾ ದಂಪತಿಗಳ ಪುತ್ರ. ಎಂ.ಎ ಇತಿಹಾಸ  ಮತ್ತು ಎಂ. ಕಾಂ ಪದವೀಧರರಾಗಿರುವ ಇವರು ಸುಮಾರು 18 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿದ್ದಾರೆ. ಕಳೆದ 16 ವರ್ಷಗಳಿಂದ ಬಂಟ್ವಾಳ ತಾಲೂಕಿನ ಮಾರ್ನಬೈಲಿನ ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಪದವಿಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿದ್ಯಾರ್ಥಿ ಜೀವನದಲ್ಲೇ ಸಾಹಿತ್ಯದ ಬಗ್ಗೆ ಒಲವಿದ್ದ ಇವರು ಅನೇಕ ಕವನಗಳನ್ನು ರಚಿಸಿದ್ದು ತಮ್ಮ ಸಹೋದ್ಯೋಗಿಯ ಸಹಕಾರದಲ್ಲಿ ಅಮ್ಮ ಪ್ರಕಾಶನವನ್ನು ಆರಂಭಿಸಿ ಈ ಮೂಲಕ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ.

ತಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ವಿವಿಧ ಸಂಘಸಂಸ್ಥೆಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆಗೆ ಪೂರಕ ವೇದಿಕೆ ಕಲ್ಪಿಸುತ್ತಾ ಬಂದಿದ್ದಾರೆ. ಎನ್ ಎಸ್ ಎಸ್, ಇಕೋ ಕ್ಲಬ್ , ಸಾಹಿತ್ಯ ಸಂಘ, ಮತದಾರರ ಸಾಕ್ಷರತಾ ಕ್ಲಬ್, ಕ್ರೀಡಾ ಸಂಘಗಳ ಮೂಲಕ ತಮ್ಮ ಸಂಸ್ಥೆಯಲ್ಲಿ ನಿರಂತರ ಪಠ್ಯ- ಸಹಪಠ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿರುತ್ತಾರೆ.

ವಿದ್ಯಾರ್ಥಿಗಳ ಬೆಳವಣಿಗೆಗೆ ನೀಡಿದ ಪ್ರೋತ್ಸಾಹವನ್ನು ಪರಿಗಣಿಸಿ ಅಬ್ದುಲ್ ಮಜೀದ್ ಅವರನ್ನು ಸಮನ್ವಯ ಶಿಕ್ಷಕ ಪ್ರಶಸ್ತಿ- 2025 ಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ನ.11 ರಂದು ಮಂಗಳೂರಿನ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯುವ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಅಕ್ಬರ್ ಅಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News