×
Ad

ಸೌದಿ ರೋಡ್ ಶೋ ಫಲಪ್ರದ, ಮಂಗಳೂರು ಕ್ಲಸ್ಟರ್ ನಲ್ಲಿ ಉದ್ಯಮ ಸ್ಥಾಪನೆಗೆ ಸೌದಿ ಕಂಪೆನಿಗಳ ಒಲವು: ಕೆಡಿಇಎಂ

Update: 2023-09-15 14:35 IST

ಮಂಗಳೂರು, ಸೆ.15: ಕರ್ನಾಟಕ ಡಿಜಿಟಲ್ ಎಕನಾಮಿ ಮಿಷನ್(ಕೆಡಿಇಎಂ) ಇತ್ತೀಚೆಗೆ ಸೌದಿಯಲ್ಲಿ ನಡೆಸಿದ ರೋಡ್ ಶೋ ಕಾರ್ಯಕ್ರಮ ಫಲಪ್ರದವಾಗಿದ್ದು, 25ಕ್ಕೂ ಅಧಿಕ ಕಂಪೆನಿಗಳು ದ.ಕ., ಉಡುಪಿ, ಉ.ಕ. ಹಾಗೂ ಕೊಡಗು ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ಕ್ಲಸ್ಟರ್ ನಲ್ಲಿ ಕಂಪೆನಿಗಳನ್ನು ತೆರೆಯಲು ಆಸಕ್ತಿ ತೋರಿವೆ ಎಂದು ಕೆಡಿಇಎಂ ಪ್ರತಿನಿಧಿಗಳು ತಿಳಿಸಿದ್ದಾರೆ.

ನಗರದ ಪ್ರೆಸ್ಕ್ಲಬ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೆಡಿಇಎಂನ ಕೈಗಾರಿಕಾ ಪ್ರಮುಖರಾದ ರೋಹಿತ್ ಭಟ್, ಮುಂದಿನ 8ರಿಂದ 12 ತಿಂಗಳಲ್ಲಿ 1,000ಕ್ಕೂ ಅಧಿಕ ಉದ್ಯೋಗಾವಕಾಶಗಳು ಮಂಗಳೂರು ಕ್ಲಸ್ಟರ್ ನಲ್ಲಿ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದರು.

ದೇಶದ ಸಿಲಿಕಾನ್ ಬೀಚ್ ಎಂದು ಗುರುತಿಸಲ್ಪಟ್ಟಿರುವ ಮಂಗಳೂರು ಕ್ಲಸ್ಟರ್ ನೇತೃತ್ವದಲ್ಲಿ ಕೆಡಿಇಎಂ ಸೆ.7ರಂದು ಸೌದಿ ಅರೇಬಿಯಾದ ಅಲ್-ಖೋಬರ್ ನಲ್ಲಿ ರೋಡ್ ಶೋ ಆಯೋಜಿಸಿತ್ತು. ಈ ಸಂದರ್ಭ 35ಕ್ಕೂ ಅಧಿಕ ಕಂಪೆನಿಗಳ ಸಿಇಒಗಳು ಸೇರಿದಂತೆ 150ಕ್ಕೂ ಅಧಿಕ ಸಿ.ಎಕ್ಸ್.ಒ.ಗಳು ಭಾಗವಹಿಸಿದ್ದರು. ಇವರೆಲ್ಲರೂ ಮಂಗಳೂರು ಕ್ಲಸ್ಟರ್ ನಲ್ಲಿ ಹೂಡಿಕೆಯೊಂದಿಗೆ ತಂತ್ರಜ್ಞಾನ ಕ್ಷೇತ್ರದ ಉದ್ದಿಮೆಗಳ ಸ್ಥಾಪನೆಗೆ ಆಸಕ್ತಿ ತೋರಿದ್ದಾರೆ. ಕೆಡಿಇಎಂನ ಸಿಇಒ ಸಂಜೀವ್ ಗುಪ್ತಾ ಹಾಗೂ ಇತರ ಪ್ರತಿನಿಧಿಗಳು ಸೌದಿಯ ಸಂಭಾವ್ಯ ಹೂಡಿಕೆದಾರರೊಂದಿಗೆ ಸಂವಾದ ನಡೆಸಿದ್ದಾರೆ. ಐಟಿ ಸೇವೆ, ಬ್ಯಾಕ್ ಆಫೀಸ್ ಕಾರ್ಯಾಚರಣೆ ಮತ್ತು ಇಂಜಿನಿಯರಿಂಗ್ ವಿನ್ಯಾಸ ಸೇವೆಗಳಿಗಾಗಿ ಮಂಗಳೂರನ್ನು ತಮ್ಮ ಕಂಪೆನಿಯ ಪ್ರಮುಖ ಕಾರ್ಯ ಕ್ಷೇತ್ರವನ್ನಾಗಿಸಲು ಸೌದಿ ಅರೇಬಿಯಾ ಕಂಪೆನಿಗಳು ಬಯಸುವ ಬಗ್ಗೆ ಮಾತುಕತೆ ವೇಳೆ ವ್ಯಕ್ತವಾಗಿವೆ ಎಂದು ರೋಹಿತ್ ಭಟ್ ತಿಳಿಸಿದರು.

ಕಳೆದ ಕೆಲವು ವರ್ಷಗಳಿಂದ ಮಂಗಳೂರಿನ ಉದ್ಯಮಿಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಕೆಡಿಇಎಂ ಇಲ್ಲಿನ ಕೈಗಾರಿಕಾ ಕ್ಲಸ್ಟರ್ ನ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿವೆ. ಕಳೆದ ಡಿಸೆಂಬರ್ ನಿಂದ ಸುಮಾರು 10 ಕಂಪೆನಿಗಳು ಕಾರ್ಯಾರಂಭಿಸಿವೆ ಎಂದು ಅವರು ಹೇಳಿದರು.

ಬಿಯಾಂಡ್ ಬೆಂಗಳೂರು ಉಪಕ್ರಮದ ಫಲವಾಗಿ ಮಂಗಳೂರು ಟೆಕ್ ಹಬ್ ಆಗಿ ಅಭಿವೃದ್ಧಿಯಾಗುತ್ತಿರುವ ಬಗ್ಗೆ ಕೆಡಿಇಎಂನ ಸಿಇಒ ಸಂಜೀವ್ ಗುಪ್ತಾ ನೇತೃತ್ವದ ನಿಯೋಗ ಸೌದಿ ಕಂಪೆನಿಗಳ ಮುಖ್ಯಸ್ಥರಿಗೆ ಮನವಿ ಮಾಡಿದೆ.

ರಾಜ್ಯದಲ್ಲಿರುವ ಉತ್ತಮ ಕೈಗಾರಿಕಾ ನೀತಿ, ಸಾಮಾಜಿಕ ಮೂಲ ಸೌಕರ್ಯ, ಕೈಗಾರಿಕೆಗಳಿಗೆ ನೀಡುವ ಪ್ರೋತ್ಸಾಹ ಮತ್ತು ಸಬ್ಸಿಡಿಗಳು, ಲಭ್ಯವಿರುವ ನುರಿತ ಉದ್ಯೋಗಿಗಳು, ಮಂಗಳೂರು ಕ್ಲಸ್ಟರ್ ನಲ್ಲಿ ಹೂಡಿಕೆ ಮಾಡಿರುವ ಕಂಪೆನಿಗಳ ವಿವರ ಹಾಗೂ ಬಿಯಾಂಡ್ ಬೆಂಗಳೂರು ಉಪಕ್ರಮದಡಿ ಮುನ್ನೆಲೆಗೆ ಬರುತ್ತಿರುವ ರಾಜ್ಯದ ಉದಯೋನ್ಮುಖ ಟೆಕ್ ಕ್ಲಸ್ಟರ್ ಗಳ ವಿವರವನ್ನು ರೋಡ್ ಶೋ ವೇಳೆ ಉದ್ಯಮಿಗಳಿಗೆ ವಿವರಿಸಲಾಗಿದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೋ, ಕೆಸಿಸಿಐನ ಅಜಿತ್ ಕಾಮತ್, ಅಶಿತ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News