×
Ad

ಸೌಜನ್ಯಾ ಹತ್ಯೆ ಪ್ರಕರಣ: ತನಿಖಾಧಿಕಾರಿಗಳ ಮಂಪರು ಪರೀಕ್ಷೆಗೆ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ ಆಗ್ರಹ

Update: 2023-09-13 21:26 IST

ಮಂಗಳೂರು : ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತನಿಖಾಧಿಕಾಧಿಕಾರಿ ಹಾಗೂ ಶವ ಪರೀಕ್ಷೆ ನಡೆಸಿದ್ದ ವೈದ್ಯರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿಯು ಮಂಗಳೂರು ತಹಶೀಲ್ದಾರ್ ಮೂಲಕ ಬುಧವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.

ಸಮಿತಿಯ ನೇತೃತ್ವದಲ್ಲಿ ಮಂಗಳೂರಿನ ಮಿನಿ ವಿಧಾನಸೌಧದ ಮುಂದೆ ಮಂಗಳವಾರ ಆರಂಭಗೊಂಡ ಧರಣಿ ಸತ್ಯಾಗ್ರಹವು ಬುಧವಾರ ಸಮಾಪ್ತಿಗೊಳಿಸುವ ಸಂದರ್ಭ ಸ್ಥಳಕ್ಕೆ ಆಗಮಿಸಿದ ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲರಿಗೆ ಸಮಿತಿಯ ಪ್ರಧಾನ ಸಂಚಾಲಕ ಬಾಲಕೃಷ್ಣ ಡಿ.ಬಿ ಮತ್ತು ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನವಿ ಹಸ್ತಾಂತರಿಸಿದರು.

ಪ್ರಕರಣದ ನಿಜವಾದ ಆರೋಪಿಗಳು ಯಾರೆಂದು ಈವರೆಗೂ ಗೊತ್ತಾಗಿಲ್ಲ. ತನಿಖೆಯ ಹಂತದಲ್ಲಿ ಯಾವುದೋ ಒತ್ತಡದಲ್ಲಿ ತನಿಖಾಧಿಕಾರಿಗಳು ಸಾಕ್ಷಿ ಮತ್ತು ದಾಖಲೆಗಳನ್ನು ಒದಗಿಸುವುದರಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಮಾಡಿರುವುದು ಕಂಡು ಬಂರುತ್ತದೆ. ನಿಜವಾದ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಹಾಗಾಗಿ ಪ್ರಕರಣದ ಮರುತನಿಖೆಯನ್ನು ನ್ಯಾಯಾಂಗ ಅಥವಾ ಇತರ ಸಂಸ್ಥೆಗಳ ಮೂಲಕ ನಡೆಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನ್ಯಾಯಕ್ಕಾಗಿ ಕಳೆದ 11 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಹೋರಾಟಗಾರರನ್ನು ನಿರ್ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಇಲ್ಲದಂತಾಗಿದೆ. ಒಕ್ಕಲಿಗರ ಸಮುದಾಯದ ಆದಿಚುಂಚನಗಿರಿ ಪೀಠದ ಸ್ವಾಮೀಜಿ ಕಾನೂನು ಹೋರಾಟದ ನೇತೃತ್ವ ವಹಿಸುವಂತೆ ಮನವಿ ಮಾಡಲಾಗಿದೆ. ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗಬೇಕು ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.

ಈ ಸಂದರ್ಭ ಸೌಜನ್ಯಾಳ ತಾಯಿ ಕುಸುಮಾವತಿ, ಬಾಲಕೃಷ್ಣ ಡಿ.ಬಿ. ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News