ಸೌಜನ್ಯ ಕೊಲೆ ಪ್ರಕರಣ: ಸೆ.11ರಿಂದ ದ.ಕ. ಡಿಸಿ ಕಚೇರಿ ಮುಂದೆ ಒಕ್ಕಲಿಗರ ಧರಣಿ
ಮಂಗಳೂರು, ಆ.29: ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಗ್ಗೆ ಮರುತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸೆ.11ರಿಂದ 13ರವರೆಗೆ ನಗರದ ಹ್ಯಾಮಿಲ್ಟನ್ ಸರ್ಕಲ್ ಬಳಿಯ ದ.ಕ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ನಡೆಸ ಲಾಗುವುದು ಎಂದು ‘ಸೌಜನ್ಯ ಪ್ರಕರಣ- ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ’ಯ ಪ್ರಧಾನ ಸಂಚಾಲಕ ಬಾಲಕೃಷ್ಣ ಡಿ.ಬಿ. ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು ಸೆ.11ರಂದು ಬೆಳಗ್ಗೆ 10ಕ್ಕೆ ಧರಣಿ ಸತ್ಯಾ ಗ್ರಹ ಆರಂಭಗೊಳ್ಳಲಿದೆ. ಮೂರು ದಿನಗಳ ಕಾಲ ಸಂಜೆ 4 ಗಂಟೆಯವರೆಗೆ ಧರಣಿ ನಡೆಯಲಿದೆ. ಬಳಿಕ ಪ್ರಕರಣದ ಮರು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಯ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸೌಜನ್ಯಾ ಪ್ರಕರಣ ಮುಗಿದ ಅಧ್ಯಾಯವಾಗಿದೆ. ಮರುತನಿಖೆ ನಡೆಸಲಾಗದು ಎಂಬುದಾಗಿ ರಾಜ್ಯ ಗೃಹಸಚಿವ ಡಾ. ಜಿ.ಪರಮೇಶ್ವರ್ ಹೇಳಿರಬಹುದು. ಆದರೆ ಅವರು ಕಾನೂನು ತಜ್ಞರಲ್ಲ. ಸರಕಾರದ ನಿವೃತ್ತ ನ್ಯಾಯಾಧೀಶರ ಮೂಲಕ ಮರುತನಿಖೆ ನಡೆಸಲೇಬೇಕು. ತನಿಖಾಧಿಕಾರಿಯನ್ನು ಕೂಡ ತನಿಖೆಗೆ ಒಳಪಡಿಸಬೇಕು. ಮರು ತನಿಖೆಗೆ ಆದೇಶ ಮಾಡುವವರೆಗೂ ಹೋರಾಟ ಮುಂದುವರೆಸಲಾಗುವುದು. ಕಾನೂನಾತ್ಮಕ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಬಾಲಕೃಷ್ಣ ಡಿ.ಬಿ. ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸಂಘದ ಅಧ್ಯಕ್ಷ ಗುರುದೇವ್ ಯು.ಬಿ., ಯುವ ಘಟಕದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಪುತ್ತೂರು ಘಟಕದ ಅಧ್ಯಕ್ಷ ಪ್ರವೀಣ್ ಮುಂಗ್ಲಿಮನೆ, ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್ ಕೊಲ್ಚಾರ್, ಕಡಬ ಘಟಕದ ಅಧ್ಯಕ್ಷ ಸುರೇಶ್ ಬೈಲು, ಸಮಿತಿಯ ಸಹ ಸಂಚಾಲಕ ರಕ್ಷಿತ್ ಪುತ್ತಿಲ, ವಿಟ್ಲ ಘಟಕದ ಅಧ್ಯಕ್ಷ ಮೋನಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.