×
Ad

ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣ: ನ್ಯಾಯ ಕೇಳಿ ಸುಳ್ಯದಲ್ಲಿ ಪ್ರತಿಭಟನೆ

Update: 2023-08-08 22:44 IST

ಸುಳ್ಯ: ಸೌಜನ್ಯಳ ಅತ್ಯಾಚಾರ, ಕೊಲೆ ನಡೆದು 11 ವರ್ಷ ಕಳೆದರೂ ನ್ಯಾಯ ಸಿಗದೇ ಇರುವುದು ಪ್ರಜಾಪ್ರಭುತ್ವಕ್ಕೆ ಅಂಟಿದ ಕಳಂಕ ಎಂದು ಹೋರಾಟಗಾರ ಮಹೇಶ್ ತಿಮರೋಡಿ ಹೇಳಿದ್ದಾರೆ.

ಬೆಳ್ತಂಗಡಿಯ ಸೌಜನ್ಯ ಹತ್ಯೆ ಪ್ರಕರಣವನ್ನು ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಒತ್ತಾಯಿಸಿ 'ನ್ಯಾಯಕ್ಕಾಗಿ ಸೌಜನ್ಯ ಹೋರಾಟ ಸಮಿತಿ'ಯ ವತಿಯಿಂದ ಸುಳ್ಯದಲ್ಲಿ ಮಂಗಳವಾರ ನಡೆದ ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದರು. ಸೌಜನ್ಯಳಿಗೆ 11 ವರ್ಷಗಳಿಂದ ನ್ಯಾಯ ಕೊಡಲು ಆಗಿಲ್ಲ. ಮಾತೆಯ ರಕ್ಷಕರು ಎನ್ನುವ ನಮಗೆ ಸೌಜನ್ಯಳ ರಕ್ಷಣೆ ನಮ್ಮಿಂದ ಆಗಿಲ್ಲ. ದೇವರ ಹೆಸರಿನಲ್ಲಿ ಧಾರ್ಮಿಕ ಭಯೋತ್ಪಾದನೆ ನಡೆಯುತ್ತಿದೆ. ಸೌಜನ್ಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗುವ ವೆರೆಗೂ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ. ನಮ್ಮ ಹೋರಾಟ ದೇವಸ್ಥಾನ, ಧರ್ಮ, ಜಾತಿಯ ವಿರುದ್ಧ ಅಲ್ಲ. ನ್ಯಾಯಾಂಗದ ಮೇಲೆ ನಂಬಿಕೆ ಇದ್ದರೆ ನೈಜ ಆರೋಪಿಗಳನ್ನು ಬಂಧಿಸಿ ಅವರಿಗೆ ಶಿಕ್ಷೆ ಆಗಲೇ ಬೇಕು ಎಂದು ಹೇಳಿದರು.

ಸೌಜನ್ಯ ತಾಯಿ ಕುಸುಮಾವತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ ನನ್ನ ಮಗಳನ್ನು ಅತ್ಯಾಚಾರ - ಕೊಲೆ ಮಾಡಿ ತಿಂದಿದ್ದಾರೆ. ಎಲ್ಲರಲ್ಲಿಯೂ ನಾನು ನ್ಯಾಯವನ್ನು ಬೇಡುತಿದ್ದೇನೆ. ಇದಕ್ಕೆಲ್ಲ ನಿಮ್ಮ ಸಹಕಾರ ಬೇಕು. ಮುಂದೆ ನಡೆಯುವ ಎಲ್ಲಾ ಹೋರಾಟಗಳಲ್ಲಿಯೂ ಭಾಗಿಯಾಗುತ್ತೇನೆ. ಇನ್ನೂ ಇಂತಹ ಪ್ರಕರಣಗಳು ನಡೆಯಬಾರದು. ಸೌಜನ್ಯಳ ಕೊಲೆ ಅತ್ಯಾಚಾರ ಪ್ರಕರಣ ಕಡೆಯದಾಗಿರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸೌಜನ್ಯಾಳ ತಂದೆ ಚಂದಪ್ಪ ಗೌಡ, ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್, ಹೋರಾಟ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಡಿ.ಬಿ.ಬಾಲಕೃಷ್ಣ, ಸುಳ್ಯ ಗೌಡ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಹೋರಾಟ ಸಮಿತಿಯ ಸಂಯೋಜಕ ಎನ್.ಟಿ. ವಸಂತ, ಜಿ.ಪಂ. ಮಾಜಿ ಸದಸ್ಯೆ ಸರಸ್ವತಿ ಕಾಮತ್, , ಕಾರ್ಯಕ್ರಮ ಸಂಚಾಲಕ ಹರೀಶ್ ಕುಮಾರ್ ಹುದೇರಿ, ಪ್ರಶಾಂತ್ ಮುರುಳ್ಯ ಮೊದಲಾದವರು ಉಪಸ್ಥಿತರಿದ್ದರು. ಅಜಿತ್ ಐವರ್ನಾಡು ಕಾರ್ಯಕ್ರಮ ನಿರೂಪಿಸಿದರು.

ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ನ್ಯಾಯ ಕೇಳಿ ನಿಂತಿಕಲ್ಲಿನಿಂದ ಆರಂಭಗೊಂಡ ವಾಹನ ಜಾಥಾ ಸುಮಾರು 11.30ರ ವೇಳೆಗೆ ಸುಳ್ಯ ನಗರ ಪ್ರವೇಶಿಸಿ ಜ್ಯೋತಿ ಸರ್ಕಲ್ ಬಳಿಯಿಂದ ನೇತೃತ್ವದಲ್ಲಿ ಸಾವಿರಾರು ಜನರು ನಗರದಲ್ಲಿ ಪಾದಯಾತ್ರೆ ಮೂಲಕ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ಪ್ರತಿಭಟನಾ ಸಭೆ ನಡೆಯಿತು. ಹಕ್ಕೊತ್ತಾಯ ಸಭೆಯ ಬಳಿಕ ಸೌಜನ್ಯ ಪ್ರಕರಣದ ಮರು ತನಿಖೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಸುಳ್ಯ ನಗರದಲ್ಲಿ ಪೊಲೀಸ್ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News