×
Ad

ತಿಮರೋಡಿ ಮನೆಯಲ್ಲಿ ಮುಂದುವರಿದ ಮಹಜರು: ಮೊಬೈಲ್ ಸಹಿತ ದೂರುದಾರನ ವಸ್ತುಗಳು ಎಸ್ಐಟಿ ವಶಕ್ಕೆ

ಧರ್ಮಸ್ಥಳ ಪ್ರಕರಣ

Update: 2025-08-26 13:31 IST

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ವಶದಲ್ಲಿರುವ ಸಾಕ್ಷಿ ದೂರುದಾರನನ್ನು ಆತ ಈ ಹಿಂದೆ ತಂಗಿದ್ದ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರ ಮನೆಗೆ ಕರೆದೊಯ್ದ ಎಸ್ಐಟಿ ಸ್ಥಳ ಮಹಜರು ಕಾರ್ಯ ಮಾಡುತ್ತಿದೆ. ಈ ವೇಳೆ ತಿಮರೋಡಿ ಮನೆಯಲ್ಲಿದ್ದ ದೂರುದಾರನಿಗೆ ಸಂಬಂಧಿಸಿದ ವಸ್ತುಗಳೆಲ್ಲವನ್ನೂ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆಯುವ ಕಾರ್ಯ ಮಾಡುತ್ತಿದ್ದಾರೆ. ಆತ ಬಳಸುತ್ತಿದ್ದ ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನು ಎಸ್ಐಟಿ ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

ಸಾಕ್ಷಿ ದೂರುದಾರ ಕಳೆದ ಕೆಲವು ತಿಂಗಳುಗಳಿಂದ ಮಹೇಶ್ ಶೆಟ್ಟಿ ತಿಮರೋಡಿಯವರ ಮನೆಯಲ್ಲಿಯೇ ವಾಸ್ತವ್ಯವಿದ್ದ ಎನ್ನಲಾಗಿದೆ. ಎಸ್ಐಟಿ ಅಧಿಕಾರಿಗಳು ತನಿಖೆ ಆರಂಭಿಸಿದ ದಿನದಿಂದಲೇ ಸಾಕ್ಷಿ ದೂರುದಾರ ಮಹೇಶ್ ಶೆಟ್ಟಿಯ ಮನೆಯಿಂದಲೇ ಪ್ರತಿದಿನ ಎಸ್ಐಟಿ ಕಚೇರಿಗೆ ಬಂದು ಹೋಗುತ್ತಿದ್ದ. ಈ ಬಗ್ಗೆ ಎಸ್ಐಟಿ ಅಧಿಕಾರಿಗಳಿಗೂ ಮಾಹಿತಿಯಿತ್ತು.

ಸದ್ಯ ಸಾಕ್ಷಿ ದೂರುದಾರನ ಬಂಧನವಾಗಿರುವುದರಿಂದ ಆತ ಉಪಯೋಗಿಸುತ್ತಿದ್ದ ಮೊಬೈಲ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡು ಮಹಜರು ನಡೆಸಬೇಕಾಗಿದೆ. ಅದೇರೀತಿ ಆತ ವಾಸಿಸುತ್ತಿದ್ದ ಮನೆಯಲ್ಲಿ ಪರಿಶೀಲನೆ ನಡೆಸಿ ಮಹಜರು ಮಾಡಬೇಕಾಗಿದ್ದು, ಅದರಂತೆ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ಪೊಲೀಸರ ಸಹಕಾರದಲ್ಲಿ ಸರ್ಚ್ ವಾರೆಂಟ್ ನೊಂದಿಗೆ ಮಹೇಶ್ ಶೆಟ್ಟಿ ತಿಮರೋಡಿಯ ಮನೆಗೆ ಇಂದು ಬೆಳಗ್ಗೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ದೂರುದಾರ ವಾಸವಿದ್ದ ಕೊಠಡಿಯಿಂದ ಆತ ಬಳಸುತ್ತಿದ್ದ ಮೊಬೈಲ್ ಫೋನ್ ಹಾಗೂ ಆತನ ಬಟ್ಟೆಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

ಮನೆಯ ಪರಿಶೀಲನೆಗೆ ಎಸ್ಐಟಿ ತೆರಳಿದ್ದ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರ ಮುಖಂಡರು ಮನೆಯಲ್ಲಿ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News