×
Ad

ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಉಸ್ತುವಾರಿ ಕಾರ್ಯದರ್ಶಿ ಅತೀಕ್ ಸೂಚನೆ

Update: 2023-10-16 20:48 IST

ಮಂಗಳೂರು: ರಾಜ್ಯ ಸರಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯ ದರ್ಶಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ಸೂಚಿಸಿದ್ದಾರೆ.

ದ.ಕ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಅಗಸ್ಟ್‌ವರೆಗೆ 3,15,726, ಸೆಪ್ಟೆಂಬರ್‌ವರೆಗೆ 3.20 ಲಕ್ಷ, ಅಕ್ಟೋಬರ್ 15ರ ತನಕ 3.44 ಲಕ್ಷ ಫಲಾನುಭವಿಗಳು ಹೆಸರು ದಾಖಲಿಸಿದ್ದಾರೆ. ಬ್ಯಾಂಕ್ ಖಾತೆಯ ಸಮಸ್ಯೆಗಳಿಂದ 33,419 ಮಂದಿಗೆ ಮೊತ್ತ ಜಮೆ ಅಗಿಲ್ಲ. ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಫಲಾನುಭವಿಗಳಿಗೆ 2,000 ರೂ, ಮೊತ್ತ ಜಮೆ ಆಗಬೇಕು ಎಂದು ಎಲ್.ಕೆ. ಅತೀಕ್ ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ ದ.ಕ.ಜಿಲ್ಲೆಯಲ್ಲಿ ಶೇ.94ರಷ್ಟು ಗೃಹ ವಿದ್ಯುತ್ ಬಳಕೆದಾರರು ಹೆಸರು ನೋಂದಾಯಿಸಿ ದ್ದಾರೆ. ಅರ್ಹ ಬಳಕೆದಾರರಿಗೆ ಶೂನ್ಯ ಬಿಲ್ ಕಳುಹಿಸಲಾಗಿದೆ. ಇದಕ್ಕಾಗಿ ರಾಜ್ಯ ಸರಕಾರದಿಂದ 224 ಕೋ.ರೂ. ಮೊತ್ತ ಮೆಸ್ಕಾಂಗೆ ಜಮೆ ಆಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಆರೋಗ್ಯ ಇಲಾಖೆಯು ಗರ್ಭಿಣಿಯರನ್ನು ಗುರುತಿಸಿ, ಸೂಕ್ತ ಆರೋಗ್ಯ ನೆರವು ನೀಡಬೇಕು. ಗರ್ಭಿಣಿಯರಲ್ಲಿ ರಕ್ತದ ಕೊರತೆ ಸಮಸ್ಯೆ ಪ್ರಮುಖವಾಗಿದೆ. ಕಬ್ಬಿಣಾಂಶಗಳ ಮಾತ್ರೆ ಸಕಾಲದಲ್ಲಿ ಒದಗಿಸಲು ಆದ್ಯತೆ ನೀಡುವಂತೆ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ಸೂಚಿಸಿದರು.

ದ.ಕ. ಜಿಲ್ಲೆಯ ಸರಕಾರಿ ಅಸ್ಪತ್ರೆಗಳಲ್ಲಿ 60 ಡಯಾಲಿಸಿಸ್ ಯಂತ್ರಗಳಿವೆ. ಮುಲ್ಕಿ, ಮೂಡುಬಿದಿರೆ, ಕಡಬ ಆಸ್ಪತ್ರೆಗಳಲ್ಲಿ ತಲಾ 3 ಡಯಾಲಿಸಿಸ್ ಯಂತ್ರಗಳಿದ್ದರೂ ಸೂಕ್ತ ಸಿಬ್ಬಂದಿಗಳಿಲ್ಲದೆ ಕಾರ್ಯಾಚರಿಸುತ್ತಿಲ್ಲ. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾ ವನೆ ಕಳುಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪ್ರತೀ ತಿಂಗಳು 24 ಲಕ್ಷ ರೂ.ಮೊತ್ತವನ್ನು ಜಿಲ್ಲೆಯಲ್ಲಿ ಹಾಸ್ಟೆಲ್ ಕಟ್ಟಡಗಳ ಬಾಡಿಗೆಗೆ ಪಾವತಿಸಲಾಗುತ್ತಿದೆ. ಈ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಆದ್ಯತೆ ನೀಡಬೇಕು ಎಂದು ಎಲ್.ಕೆ. ಅತೀಕ್ ಸೂಚಿಸಿದರು.

ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ದ.ಕ.ಜಿಪಂ ಸಿಇಒ ಡಾ. ಆನಂದ್ ಕೆ., ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್, ಮಹಾನಗರಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಉಪಸ್ಥಿತರಿದ್ದರು. ಸಭೆಗೆ ಮುನ್ನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಗರದಲ್ಲಿರುವ ವಿವಿಧ ಸರಕಾರಿ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News