ಸೆ.29: ಒಮೆಗಾ ಆಸ್ಪತ್ರೆಯಲ್ಲಿ ‘ಹೃದಯದ ಬಗ್ಗೆ ತಿಳಿಯಿರಿ’ ಕಾರ್ಯಕ್ರಮ
ಮಂಗಳೂರು, ಸೆ.28: ವಿಶ್ವ ಹೃದಯ ದಿನದ ಅಂಗವಾಗಿ ರೋಟರಿ ಕ್ಲಬ್ ಮಂಗಳೂರು ದಕ್ಷಿಣ ಹಾಗೂ ಒಮೆಗಾ ಆಸ್ಪತ್ರೆಯ ಸಹಯೋಗದಲ್ಲಿ ಸೆ.29ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಉಚಿತ ಸಿಪಿಆರ್ ತರಬೇತಿ ಶಿಬಿರ ನಡೆಯಲಿದೆ ಎಂದು ಟ್ರಾಮಾ ಕೇರ್ ಇಂಟರ್ ನ್ಯಾಷನಲ್ ನಿರ್ದೇಶಕ ಇ.ಕೆ. ರಾಧಾಕೃಷ್ಣನ್ ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಒಮೆಗಾ ಆಸ್ಪತ್ರೆ ನಿರ್ದೇಶಕ ಎ.ಜಿ. ಜಯಕೃಷ್ಣನ್ ಇಂದು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಯುವಕರು ಹೃದಯಾಘಾತಕ್ಕೆ ಬಲಿಯಾಗುವ ಘಟನೆಗಳು ನಡೆಯುತ್ತವೆ. ಹೃದಯಾಘಾತ ಆದಾಗ 3 ನಿಮಿಷಗಳಷ್ಟೇ ಅತ್ಯಮೂಲ್ಯವಾಗಿರುತ್ತದೆ. ಆ ಮೂರು ನಿಮಿಷಗಳನ್ನು ಹೇಗೆ ನಿಭಾಯಿಸುವುದು ಎನ್ನುವುದರ ಬಗ್ಗೆ ತರಬೇತಿ ಪಡೆದುಕೊಂಡರೆ ಹೃದಯಾಘಾತದಿಂದ ಉಂಟಾಗುವ ಸಾವನ್ನು ತಪ್ಪಿಸಬಹುದು. ಹೀಗಾಗಿ ವಿಶ್ವ ಹೃದಯ ದಿನದ ಅಂಗವಾಗಿ ‘ಹೃದಯ ಬಳಸಿ-ಹೃದಯದ ಬಗ್ಗೆ ತಿಳಿಯಿರಿ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಮಂಗಳೂರು ದಕ್ಷಿಣ ಅಧ್ಯಕ್ಷ ಹರ್ಷ ಆಚಾರ್, ರೋಟರಿ ಮಂಗಳೂರು ಅಧ್ಯಕ್ಷ ಕಿಶನ್ ಕುಮಾರ್, ಜಯಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.