ಸುಹಾಸ್ ಶೆಟ್ಟಿ ಕೊಲೆ, ಇತರ ಹಲ್ಲೆ ಪ್ರಕರಣದ ಕಿಡಿಗೇಡಿಗಳನ್ನೂ ಶೀಘ್ರ ಬಂಧಿಸಲು ಪೊಲೀಸ್ ವರಿಷ್ಠಾಧಿಕಾರಿಗೆ ಸ್ಪೀಕರ್ ಯುಟಿ ಖಾದರ್ ಸೂಚನೆ
ಯುಟಿ ಖಾದರ್
ಮಂಗಳೂರು: ಬಜ್ಪೆಯಲ್ಲಿ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚಿ ಮತ್ತು ದ.ಕ. ಜಿಲ್ಲೆಯಲ್ಲಿ ನಡೆದ ಇತರ ಹಲ್ಲೆ ಪ್ರಕರಣದ ಕಿಡಿಗೇಡಿಗಳನ್ನೂ ಶೀಘ್ರ ಬಂಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸ್ಪೀಕರ್ ಯುಟಿ ಖಾದರ್ ಅವರು ಸೂಚನೆ ನೀಡಿದ್ದಾರೆ.
ಅಡ್ಯಾರು, ಕುಂಟಿಕಾನ ಹಾಗೂ ಜಿಲ್ಲೆಯ ಇತರ ಕಡೆಗಳಲ್ಲಿ ಅಮಾಯಕರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಅವರನ್ನು ಶೀಘ್ರವಾಗಿ ಪತ್ತೆ ಹಚ್ಚಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಯು ಟಿ ಖಾದರ್ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೆಲವೆಡೆ ಬಲವಂತದ ರಸ್ತೆ ತಡೆ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುವಿಕೆ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕೆಲವರು ಪ್ರಯತ್ನಪಟ್ಟಿದ್ದು, ಅಂಥವರನ್ನು ಕೂಡಾ ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಯು ಟಿ ಖಾದರ್ ಅವರು ಸೂಚನೆ ನೀಡಿದ್ದಾರೆ.