×
Ad

ನರೇಗಾ ಕಾನೂನು ತಿದ್ದುಪಡಿ ಬಗ್ಗೆ ವಿಶೇಷ ಅಧಿವೇಶನ: ದಿನೇಶ್ ಗುಂಡೂರಾವ್

Update: 2026-01-09 20:23 IST

ಮಂಗಳೂರು, ಜ.9: ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿದ್ದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರಕಾರ ಬೆಂಕಿ ಹಚ್ಚಿದೆ. ಈ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯ ಮೇಲೆ ಚಪ್ಪಡಿ ಕಲ್ಲು ಹಾಕಲಾಗಿದೆ. ಇದನ್ನು ವಿರೋಧಿಸಿ ರಾಜ್ಯ ಸರಕಾರ ವಿಶೇಷ ಅಧಿವೇಶನ ಕರೆಯುವ ಚಿಂತನೆಯನ್ನೂ ನಿನ್ನೆಯ ಸಭೆಯಲ್ಲಿ ಮುಖ್ಯಮಂತ್ರಿ ಪ್ರಸ್ತಾವಿಸಿರುವುದಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ದಿಂದ ನಡೆಯುತ್ತಿರುವ ಅನ್ಯಾಯದ ಬಗ್ಗೆ ರಾಜ್ಯದ ಜನತೆಗೆ ತಿಳಿಸಬೇಕಾಗಿದೆ. ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲೂ ಯೋಜನೆಯ ಕಾನೂನು ತಿದ್ದುಪಡಿ ಬಗ್ಗೆ ಚರ್ಚೆ ಆಗಿದೆ. ರಾಜ್ಯದಲ್ಲೂ ಹೋರಾಟ ನಡೆಯಲಿದೆ. ಅಧಿವೇಶನದಲ್ಲೂ ಇದರ ಬಗ್ಗೆ ಚರ್ಚೆ ಆದಾಗ ಎಲ್ಲಾ ಪಕ್ಷದವರೂ ಅವರವರ ಅಭಿಪ್ರಾಯ ತಿಳಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಯೋಜನೆಯ ಹೊಸ ಕಾನೂನಿನಿಂದ ಪಂಚಾಯತ್ ಮಟ್ಟದಲ್ಲಿಯೂ ಇದರ ಬಾಧಕಗಳ ಬಗ್ಗೆ ಅನುಭವ ಆಗಲಿದೆ. ಈ ಯೋಜನೆಯೇ ಬಂದ್ ಆಗುತ್ತಾ ಸಾಗಲಿದೆ. ಈ ಕಾನೂನು ವಿರುದ್ಧ ಪಕ್ಷದ ವತಿಯಿಂದ ಪಾದಯಾತ್ರೆ ಮಾಡುವ ಆಲೋಚನೆಯೂ ಇದೆ. ಕೆಪಿಸಿಸಿಯವರು ಯಾವ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ನಿರ್ಧರಿಸಲಿದ್ದಾರೆ ಎಂದವರು ಹೇಳಿದರು.

20 ವರ್ಷಗಳ ಹಿಂದೆ ಯುಪಿಎ ಸರಕಾರ ದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಕ್ರಾಂತಿಕಾರಿ ಕಾನೂನು ಜಾರಿಗೆ ತಂದಿತ್ತು. ಬಳಿಕ ಅದನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಎಂದು ಬದಲಾಯಿಸಲಾಯಿತು. ಲಕ್ಷಾಂತರ ಮಂದಿಗೆ ಉದ್ಯೋಗದ ಜತೆಗೆ ಕೂಲಿಯನ್ನು ನಿಯಂತ್ರಣಕ್ಕೆ ತರುವುದು. ಗ್ರಾಪಂ ವ್ಯವಸ್ಥೆಯಲ್ಲಿ ಕೆಲಸ ಕಾರ್ಯದ ಮೂಲಕ ಗ್ರಾಮೀಣ ಭಾಗದ ಅಭಿವೃದ್ಧಿಗೆ, ಆಸ್ತಿಗಳ ನಿರ್ಮಾಣಕ್ಕೆ ಪೂರಕವಾಗಿದ್ದ ಈ ಯೋಜನೆ ಸಮಾಜದಲ್ಲಿ ಮಹತ್ತರವಾದ ಬದಲಾವಣೆಗೆ ಶಕ್ತಿ ತುಂಬಿದೆ. ಆದರೆ ಪ್ರಧಾನಿ ಮೋದಿ ಸರಕಾರ ಸಾರ್ವಜನಿಕರ ಅಭಿಪ್ರಾಯ ಪಡೆಯದೆ, ಸಂಸತ್ತಿನಲ್ಲಿ ಚರ್ಚಿಸದೆ ಸರ್ವಾಧಿಕಾರ ಧೋರಣೆಯ ಬುಲ್ಡೋಜ್‌ನಂತೆ ವಿಚಿತ್ರ ಹೆಸರಿನೊಂದಿಗೆ ಹೊಸ ಕಾನೂನು ಜಾರಿಗೆ ತಂದಿದೆ ಎಂದು ಅವರು ಆರೋಪಿಸಿದರು.

ಹಿಂದೆ ಯುಪಿಎ ಸರಕಾರ ಈ ಯೋಜನೆ ಆರಂಭಿಸಿದಾಗಲೇ ಇದಕ್ಕೆ ಇದನ್ನು ಅಂದು ಕೂಡಾ ಮೋದಿಯವರು ವಿರೋಧಿಸಿದ್ದರು. ಬಿಜೆಪಿಯಾಗಲಿ, ಆರೆಸ್ಸೆಸ್ಸಾಗಲಿ ಪ್ರಗತಿಪರ ವಿಚಾರಕ್ಕೆ ಕೆಲಸ ಮಾಡಿದ ಇತಿಹಾಸವೇ ಇಲ್ಲ. ಮೀಸಲಾತಿ ಪರ ಮಾತನಾಡಿಲ್ಲ. ಮಹಿಳೆಯರ ಸಬಲೀಕರಣದ ಬಗ್ಗೆ ಧ್ವನಿ ಎತ್ತಿಲ್ಲ. ಕಾಂಗ್ರೆಸ್ ಪಕ್ಷ ಸಂಪೂರ್ಣ ಸ್ವಚ್ಛ, ನಾವೇನೂ ತಪ್ಪೇ ಮಾಡಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಕಾಂಗ್ರೆಸ್ ನೇತೃತ್ವದಲ್ಲಿ ದೇಶದಲ್ಲಿ ಉದ್ಯೋಗ ಖಾತ್ರಿ, ಶಿಕ್ಷಣ ಹಕ್ಕು, ಆಹಾರದ ಹಕ್ಕು, ಲೋಕಪಾಲ್, ಮಾಹಿತಿ ಹಕ್ಕು, ಅರಣ್ಯವಾಸಿಗಳ ಪರ ಹಕ್ಕುಗಳು ಜಾರಿಯಾಗಿವೆ. ಆದರೆ ಕಳೆದ 12 ವರ್ಷಗಳ ಆಡಳಿತಾವಧಿಯಲ್ಲಿ ಇಂತಹ ಯಾವುದೇ ಒಂದು ಯೋಜನೆ ಆಗಿಲ್ಲ. ಮಹಿಳಾ ಮೀಸಲಾತಿ ಕಾನೂನು ಘೋಷಣೆ ಮಾಡಿದ್ದರೂ ಇನ್ನೂ ಅನುಷ್ಟಾನ ಮಾಡಲಾಗಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

ದ.ಕ. ಜಿಲ್ಲೆಯಲ್ಲಿ 2022-23ರಲ್ಲಿ 76 ಕೋಟಿರೂ. 2023-24ರಲ್ಲಿ 65 ಕೋಟಿ ರೂ., 2024-25ರಲ್ಲಿ 64 ಕೋಟಿ ರೂ. ಈ ಯೋಜನೆಯಡಿ ವೆಚ್ಚವಾಗಿದೆ. ಪ್ರತಿಯೊಂದು ಹಳ್ಳಿ, ಗ್ರಾ.ಪಂ.ಗಳಲ್ಲಿ ಸಣ್ಣಪುಟ್ಟ ಕಾಮಗಾರಿಗಳ ಮೂಲಕ ಹಣ ಬಂದಿದೆ. ಆದರೆ ಈ ಯೋಜನೆಯ ಸ್ವರೂಪ ಬದಲಾವಣೆಯಿಂದ ಗ್ರಾಮ ಪಂಚಾಯತ್‌ನ ಆರ್ಥಿಕತೆಯ ಶಕ್ತಿಯನ್ನು ಕುಗ್ಗಿಸುತ್ತದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ ಮೊದಲಾದ ರಾಜ್ಯಗಳಿಗೆ ಕೇಂದ್ರ ಸರಕಾರ ಸಹಕಾರ ನೀಡದೆ ಸತಾಯಿಸುತ್ತಿದೆ. ಕೇಂದ್ರದಿಂದ ದೊರೆಯಬೇಕಾದ ನ್ಯಾಯಯುತವಾದ ಆರ್ಥಿಕ ಹಕ್ಕನ್ನು ನೀಡದೆ ರಾಜ್ಯವು ಹಣಕಾಸು ತೊಂದರೆಗಳನ್ನು ಅನುಭವಿಸುವಂತಾಗಿದೆ. ಉತ್ತಮ ರೀತಿಯಲ್ಲಿ ಜನಪರವಾಗಿದ್ದ ಕಾನೂನನ್ನು ಬದಲಾಯಿಸುವಾಗ, ರಾಜ್ಯದ ಪಾಲನ್ನು ಬಯಸುವಾಗ ಈ ಬಗ್ಗೆ ರಾಜ್ಯದ ಪ್ರತಿನಿಧಿಗಳನ್ನು ಕರೆದು ಚರ್ಚೆಯನ್ನೇ ಮಾಡಲಾಗಿಲ್ಲ. ಇದು ಸರ್ವಾಧಿಕಾರದ ಧೋರಣೆ ಅಲ್ಲದೆ ಮತ್ತೇನು ಎಂದವರು ಪ್ರಶ್ನಿಸಿದರು.

ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಪಿಎಂ ಹೆಸರಿನಲ್ಲಿ ಜಾರಿಗೆ ತಂದಿದೆ. ಆದರೆ ಹೆಸರು ಫೋಟೋ ಮಾತ್ರ ಕೇಂದ್ರದ್ದು, ದುಡ್ಡು ರಾಜ್ಯದ್ದು. ಆಯುಷ್ಮಾನ್ ಭಾರತ್ ಹೆಸರು ಕೇಂದ್ರದ್ದು. ದುಡ್ಡು ರಾಜ್ಯ ಸರಕಾರ ನೀಡುವುದು. ದೇಶದ ಜನರ ಹಿತಕ್ಕಾಗಿ ಬಿಜೆಪಿ ಯಾವುದೇ ಕಾನೂನು, ಯೋಜನೆ ರೂಪಿಸಿಲ್ಲ. ಅವರ ಯೋಜನೆ ಏನಿದ್ದರೂ ಜನರ ಭಾವನಾತ್ಮಕ ವಿಚಾರಗಳನ್ನು ಕೆರಳಿಸುವುದು. ಮಂದಿರ, ಮಸೀದಿ, ಹಿಂದುತ್ವ, ಧರ್ಮರಕ್ಷಣೆ, ಪಾಕಿಸ್ತಾನ ಎಂದು ಹೇಳಕೊಂಡು ಜನರ ಮತ ಪಡೆದಿದ್ದಾರೆಯೇ ಹೊರತು ಸಮಾಜವನ್ನು ಸಂಘಟಿಸುವ ಯಾವುದೇ ಒಂದು ಕೆಲಸ ಮಾಡಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಗೋಷ್ಟಿಯಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ, ಮುಖಂಡರಾದ ಪದ್ಮರಾಜ್, ಶಶಿಧರ ಹೆಗ್ಡೆ, ಮನುರಾಜ್, ವಿನಯರಾಜ್, ವಿಶ್ವಾಸ್ ಕುಮಾರ್ ದಾಸ್, ಶುಬೋದಯ ಆಳ್ವ, ಡೆನ್ನಿಸ್ ಡಿಸಿಲ್ವಾ, ಟಿ.ಕೆ. ಸುಧೀರ್, ಲಾವಣ್ಯ ಬಲ್ಲಾಳ್‌, ವಿಕಾಶ್ ಶೆಟ್ಟಿ, ಸಂತೋಷ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಕೇಂದ್ರ ದಿವಾಳಿ ಆಗಿದೆಯೇ ?

ಹಿಂದೆ ಮನರೇಗ ಯೋಜನೆಯಡಿ 100 ದಿನದ ಉದ್ಯೋಗ ಖಾತ್ರಿ ಜತೆಗೆ ಸಂಪೂರ್ಣ ಕೂಲಿಯನ್ನು ಕೇಂದ್ರ ಸರಕಾರವೇ ನೀಡಬೇಕಿತ್ತು. ಸಲಕರಣೆಯಲ್ಲಿ ರಾಜ್ಯ ಸರಕಾರ ಶೇ. 25 ಪಾಲು ಒದಗಿಸಬೇಕಿತ್ತು. ಇದೀಗ ಕೂಲಿಯಲ್ಲಿ ಶೇ. 40ರಷ್ಟು ರಾಜ್ಯ ಸರಕಾರ ಕೊಡಬೇಕು. ಅಂದರೆ ಕೇಂದ್ರ ಸರಕಾರದಲ್ಲಿ ದುಡ್ಡಿಲ್ಲವೇ, ಕೇಂದ್ರ ದಿವಾಳಿ ಆಗಿದೆಯೇ ಎಂದು ಪ್ರಶ್ನಿಸಿದ ಸಚಿವ ದಿನೇಶ್ ಗುಂಡೂರಾವ್, ಈಗಾಗಲೇ ಆರ್ಥಿಕವಾಗಿ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳ ಮೇಲೆ ಆರ್ಥಿಕ ಸಂಕಷ್ಟ ಹೇರುತ್ತಿರುವ ಕೇಂದ್ರ ಸರಕಾರ ಇದೀಗ ಯೋಜನೆಯ ಸ್ವರೂಪ ಬದಲಾಯಿಸುವ ಮೂಲಕ ಮತ್ತಷ್ಟು ಹೊರೆ ನೀಡಲು ಮುಂದಾಗಿದೆ ಎಂದು ಆರೋಪಿಸಿದರು.

ಯೋಜನೆಯಲ್ಲಿದ್ದ ಗಾಂಧಿ ಹೆಸರನ್ನು ತೆಗೆದಾಗ ನಾವು ಪ್ರಶ್ನಿಸುವುದು ತಪ್ಪೇ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಇಂತಹ ಜನವಿರೋಧಿ, ರೈತ ವಿರೋಧಿ, ಬಡವರ ವಿರೋಧಿ ಯೋಜನೆಯಿಂದ ಗಾಂಧಿ ಹೆಸರು ತೆಗೆದಿರುವುದೇ ಒಳ್ಳೆಯದು. ಆದರೆ ಹೊಸ ಕಾನೂನಿನ ಮೂಲಕ ಸಾಮಾಜಿಕ ಕಳಕಳಿಯ ಯೋಜನೆಯನ್ನೇ ಕೇಂದ್ರ ಸರಕಾರ ಕೊಂದು ಹಾಕಿದೆ. ಹೊಸ ಕಾನೂನು ವಿಕೇಂದ್ರೀಕರಣದ ವಿರುದ್ಧವಾದ ಕಾನೂನು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News