×
Ad

ಮಂಗಳೂರು| ಶುಲ್ಕ ಕಟ್ಟದ್ದಕ್ಕೆ ದಂಡ ವಸೂಲಿ ಆರೋಪ: ಶ್ರೀ ದೇವಿ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

Update: 2025-11-07 20:40 IST

ಮಂಗಳೂರು: ನಗರ ಬಳ್ಳಾಲ್‌ಬಾಗ್‌ನಲ್ಲಿರುವ ಶ್ರೀ ದೇವಿ ಕಾಲೇಜಿನ ಶೈಕ್ಷಣಿಕ ಶುಲ್ಕ ಪಾವತಿ ಮಾಡಲು ವಿಳಂಬಿಸಿದ ಪದವಿ ವಿದ್ಯಾರ್ಥಿಗಳಿಂದ ದಿನನಿತ್ಯ 100 ರೂ. ದಂಡ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ಯಪಡಿಸಿದ ಘಟನೆ ಶುಕ್ರವಾರ ಕಾಲೇಜಿನ ಕ್ಯಾಂಪಸ್‌ನಲ್ಲಿ ನಡೆದಿದೆ.

ಬೆಳಗ್ಗೆಯೇ ತರಗತಿ ಬಹಿಷ್ಕರಿಸಿದ ಪದವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾವು ಕಾಲೇಜಿಗೆ ಪ್ರವೇಶ ಪಡೆಯುವಾಗ ದಂಡದ ಬಗ್ಗೆ ಯಾವುದೇ ಸೂಚನೆ ನೀಡಿರಲಿಲ್ಲ. ಇದೀಗ ಶುಲ್ಕ ಪಾವತಿಸದ ನಮ್ಮಿಂದ ದಿನನಿತ್ಯ 100 ರೂ. ದಂಡ ವಸೂಲು ಮಾಡುತ್ತಿದ್ದಾರೆ. ತರಗತಿ ಹಾಜರಾತಿ ಕೊರತೆಗೂ ದಂಡ ವಿಧಿಸಲಾಗುತ್ತಿದೆ.  ಅದಲ್ಲದೆ ಬೆಳಗ್ಗೆ 10ರ ಬಳಿಕ ಕಾಲೇಜಿಗೆ ಬಂದ ನಮಗೆ ಲಿಫ್ಟ್ ಬಳಕೆ ಮಾಡಲು ಅವಕಾಶ ಕೊಡುತ್ತಿಲ್ಲ. 6ನೆ ಮಹಡಿಯಲ್ಲೂ ತರಗತಿ ಇದ್ದು, ನಾವು ಮೆಟ್ಟಿಲು ಹತ್ತಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಹೋರಾಟದ ಎಚ್ಚರಿಕೆ: ಶುಲ್ಕದ ವಿಳಂಬ ಪಾವತಿಯ ನೆಪದಲ್ಲಿ ದಿನಕ್ಕೆ 100. ರೂ.ನಂತೆ ದಂಡ ವಸೂಲಿ ಮಾಡುತ್ತಿರುವುದು ಮಾತ್ರವಲ್ಲ ದಂಡ ಕಟ್ಟಲೇಬೇಕು ಎಂದು ಕಾಲೇಜು ಮಂಡಳಿ ವಿದ್ಯಾರ್ಥಿಗಳಿಗೆ ಒತ್ತಡ ಹೇರುತ್ತಿರುವುದು ಖಂಡನೀಯ. ಇದು ಶಿಕ್ಷಣ ನೀತಿಗೆ ವಿರುದ್ಧವಾಗಿದೆ ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಆರೋಪಿಸಿದೆ.

ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳು ಶುಕ್ರವಾರ ನಡೆಸಿರುವ ಹೋರಾಟವನ್ನು ಬೆಂಬಲಿಸಿರುವ ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಸಂಘಟನೆಯು ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಜಿಲ್ಲಾಡಳಿತವು ಕಾಲೇಜಿನ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದೆ.

ಆರು ಅಂತಸ್ತಿನ ಕಾಲೇಜು ಕಟ್ಟಡದಲ್ಲಿ ಒಂದೊಂದು ಮಹಡಿಯಲ್ಲಿ ಮೂರು ತರಗತಿಗಳಲ್ಲಿ ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೇವಲ ಒಂದು ಶೌಚಾಲಯ ಮಾತ್ರ ಇದೆ. ಆ ಶೌಚಾಲಯ ಬಳಸಿ ಬರುವಷ್ಟರಲ್ಲಿ ತರಗತಿಯ ಅವಧಿ ಮುಗಿದಿರುತ್ತದೆ. ಶೌಚಾಲಯದ ಕೊರತೆಯೂ ಹಾಜರಾತಿ ಕಡಿಮೆಯಾಗಲು ಕಾರಣವಾಗಿದೆ. ಶುಚಿತ್ವದ ಬಗ್ಗೆ ಕಾಲೇಜು ಮಂಡಳಿ ಗಮನ ಹರಿಸುತ್ತಿಲ್ಲ ಎಂದು ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ವಿನುಷ ರಮಣ ಮತ್ತು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆರೋಪಿಸಿದ್ದಾರೆ.

ದಂಡ ವಸೂಲಿ ವಿರೋಧಿಸಿ ಹೋರಾಟ ನಡೆಸಿದ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಅವರಿಗೆ ಕಿರುಕುಳ ನೀಡಿದರೆ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News