ಬೀದಿಬದಿ ಮಹಿಳಾ ವ್ಯಾಪಾರಿ ಆತ್ಮಹತ್ಯೆಗೆ ಯತ್ನ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಮಂಗಳೂರು, ಆ.23: ಬೀದಿಬದಿ ಮಹಿಳಾ ವ್ಯಾಪಾರಿಯ ಮೇಲೆ ಮಾನಸಿಕ ದೌರ್ಜನ್ಯವನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ, ಅನಗತ್ಯ ಕಿರುಕುಳ ನೀಡಿದ ಪರಿಣಾಮ ಬೀದಿಬದಿ ಮಹಿಳಾ ವ್ಯಾಪಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮಹಿಳೆಗೆ ಕಿರುಕುಳ ಮುಂದುವರಿದರೆ ಬೋಂದೆಲ್ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಎಚ್ಚರಿಸಿದರು.
ಮಹಿಳಾ ಬೀದಿ ಬದಿ ವ್ಯಾಪಾರಿ ಶಾಲಿನಿಗೆ ಮಾನಸಿಕ ಕಿರುಕುಳ ನೀಡಿ ಆತ್ಮಹತ್ಯೆ ಯತ್ನಕ್ಕೆ ಕಾರಣರಾಗಿರು ವವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿ, ಅನಧಿಕೃತ ಆಟೋ ನಿಲ್ದಾಣದ ಪರ ನಿಂತು ಬೀದಿ ವ್ಯಾಪಾರಿಗೆ ಬೆದರಿಕೆ ಹಾಕಿದ ಪಾಲಿಕೆ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಮತ್ತು ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ಮಂಗಳೂರು ನಗರ ಸಮಿತಿ ನೇತೃತ್ವದಲ್ಲಿ ನಗರದ ಮಿನಿ ವಿಧಾನ ಸೌಧದ ಮುಂದೆ ಶನಿವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಅನಧಿಕೃತ ರಿಕ್ಷಾ ಪಾರ್ಕಿಗೆ ವಿಧಾನ ಪರಿಷತ್ ಸದಸ್ಯರ ಅನುದಾನ ದುರ್ಬಳಕೆ ಮಾಡಲಾಗಿದೆ. ಬಡ ಮಹಿಳೆಗೆ ಕಳೆದ ಒಂದು ತಿಂಗಳಿನಿಂದ ಹಿಂಸೆ ನೀಡಲಾಗುತ್ತಿದ್ದರೂ ಆರೋಪಿಗಳನ್ನು ರಕ್ಷಣೆ ಮಾಡಲು ದುರ್ಬಲ ಸೆಕ್ಷನ್ ದಾಖಲಿಸಲಾಗಿದೆ ಎಂದು ಇಮ್ತಿಯಾಝ್ ಆರೋಪಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್.ಎಸ್ ಮಾತನಾಡಿದರು.
ಜನವಾದಿ ಮಹಿಳಾ ಸಂಘಟನೆಯ ಅಸುಂತ ಡಿಸೋಜ, ಯೋಗಿತಾ ಸುವರ್ಣ, ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಮುಝಫರ್ ಅಹ್ಮದ್, ಸಿಕಂದರ್ ಬೇಗ್, ಹಂಝ, ನೌಷಾದ್ ಕಣ್ಣೂರು, ರಫೀಕ್ ಪಾಂಡೇಶ್ವರ, ರಾಮಚಂದ್ರ ರಾವ್, ಗಂಗಮ್ಮ, ಎಂ.ಎನ್. ಶಿವಪ್ಪ, ಪ್ರದೀಪ್, ವಿಜಯ್ ಜೈನ್, ಅಬ್ದುಲ್ ಖಾದರ್ ವಾಮಂಜೂರ್, ಅನ್ಸಾರ್ ಬಜಾಲ್,ಚಂದ್ರಹಾಸ್ ಪಡೀಲ್, ಜಮಾಲ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.