ಸುಳ್ಯ | ಅನುದಾನ ತಂದರೂ ತಮ್ಮ ವಿರುದ್ದ ರಾಜಕೀಯ ಷಡ್ಯಂತ್ರ : ಟಿ.ಎಂ.ಶಹೀದ್ ತೆಕ್ಕಿಲ್
ಸುಳ್ಯ : ಸಂಪಾಜೆ ಗ್ರಾಮದ ಅಭಿವೃದ್ಧಿಗೆ 15 ಕೋಟಿ ರೂ. ಅನುದಾನ ತಂದಿದ್ದರೂ, ಅನುದಾನ, ಅಭಿವೃದ್ಧಿ ಕಾರ್ಯಗಳನ್ನು ಕತ್ತಲಲ್ಲಿಟ್ಟು ತಮ್ಮ ವಿರುದ್ಧ ಕೆಲವರು ನಿರಂತರ ರಾಜಕೀಯ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ಅಭಿವೃದ್ಧಿಗೆ ಅನುದಾನ ತರುವುದು ತಪ್ಪೇ ಎಂದು ಪ್ರಶ್ನಿಸಿದ ಅವರು ಕಳೆದ 35 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಸಂಪಾಜೆ, ಅರಂತೋಡು ಗ್ರಾಮಗಳ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತಂದಿದ್ದೇನೆ. ಕೆಲವರು ತನ್ನ ವಿರುದ್ಧ ಹೈಕಮಾಂಡ್ಗೆ ದೂರು ನೀಡುವುದಾಗಿ ಕೆಲವು ಮಾಧ್ಯಮಗಳಲ್ಲಿ ನೋಡಿದೆ, ದೂರು ನೀಡುವವರು ಮೊದಲು ಬ್ಲಾಕ್, ಡಿಸಿಸಿಗೆ ನೀಡಲಿ ಅದು ಬಿಟ್ಟು ಹೈಕಮಾಂಡ್ಗೆ ದೂರು ನೀಡುವ ಕ್ರಮ ಪಕ್ಷದಲ್ಲಿ ಇಲ್ಲ ಎಂದು ಹೇಳಿದರು.
ಸಂಪಾಜೆ ಗ್ರಾಮದ ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಅಧ್ಯಕ್ಷತೆಯಲ್ಲಿ ಎರಡು ಬಾರಿ ಸಂಪಾಜೆ ಗ್ರಾಮಕ್ಕೆ ಗಾಂಧಿ ಗ್ರಾಮ ಪುರಸ್ಕಾರ ಬಂದಿದೆ. ಪ್ರಳಯ, ಭೂಕಂಪ ಆದ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಗ್ರಾಮದ ಅಭಿವೃದ್ಧಿಗೆ ದುಡಿದಿದ್ದಾರೆ. ಅಭಿವೃದ್ಧಿ ಯಾರು ಮಾಡಿದರೂ ಅವರಿಗೆ ಬೆಂಬಲ ನೀಡುತ್ತೇವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ ಶಕ್ತಿವೇಲು, ಮಾಜಿ ಅಧ್ಯಕ್ಷೆ ಸುಂದರಿ ಮುಂಡಡ್ಕ, ಸದಸ್ಯೆ ವಿಮಲಾ ಪ್ರಸಾದ್, ಪ್ರಮುಖರಾದ ಸಲೀಂ ಪೆರುಂಗೋಡಿ, ಸಿದ್ದಿಕ್ ಕೊಕ್ಕೊ, ಅಜರುದ್ದೀನ್, ಮುನೀರ್ ದಾರಿಮಿ, ಜುನೈದ್, ಉಪಸ್ಥಿತರಿದ್ದರು.