×
Ad

ಸುರತ್ಕಲ್‌: ಸಮುದ್ರದಲ್ಲಿ ಮುಳುಗಿ ಓರ್ವ ಯುವಕ ಮೃತ್ಯು; ಇನ್ನೋರ್ವ ನಾಪತ್ತೆ

Update: 2025-04-15 22:02 IST

ಸುರತ್ಕಲ್‌: ಸಮುದ್ರ ವೀಕ್ಷಣಗೆ ಬಂದಿದ್ದ ಇಬ್ಬರು ಸಮುದ್ರ ಪಾಲಾಗಿ, ಓರ್ವ ಮೃತಪಟ್ಟು ಇನ್ನೋರ್ವ ನಾಪತ್ತೆಯಾಗಿರುವ ಘಟನೆ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಎನ್‌ಐಟಿಕೆ ಬೀಚ್‌ ನಲ್ಲಿ ಮಂಗಳವಾರ ಸಂಜೆ ವರದಿಯಾಗಿದೆ.

ಮೃತನನ್ನು ವಿವೇಕಾನಂದ ಬಂಜನ್ ಅವರ ಪುತ್ರ ಧ್ಯಾನ್ ಬಂಜನ್ (18) ಮತ್ತು ಮೂಲತಃ ಸೂರಿಂಜೆ ನಿವಾಸಿ ಮುಂಬೈನಲ್ಲಿ ಉದ್ಯೋಗಿಯಾಗಿರುವ ಉಮೇಶ್‌ ಕುಲಾಲ್‌ ಎಂಬವರ ಮಗ ಅನೀಶ್‌ ಕುಲಾಲ್‌ (15) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೂರಿಂಜೆಯ ಪ್ರಖ್ಯಾತ ಎಂಬವರ ಮನೆಗೆ ಮದುವೆ ಸಮಾರಂಭಕ್ಕೆಂದು ಮುಂಬೈನಿಂದ ಬಂದಿದ್ದ 10 ಮಂದಿ ಸದಸ್ಯರ ತಂಡ ಮಂಗಳವಾರ ಸಂಜೆಯ ವೇಳೆಗೆ ಎನ್‌ಐಟಿಕೆ ಬೀಚ್‌ಗೆ ವಿಹಾರಕ್ಕೆಂದು ಬಂದಿತ್ತು. ಈ ವೇಳೆ ಬೃಹತ್‌ ಅಲೆಯ ರಭಸಕ್ಕೆ ನೀರಿನಲ್ಲಿ ಆಟವಾಡುತ್ತಿದ್ದ ಧ್ಯಾನ್‌ ಮತ್ತು ಅನೀಶ್‌ ಸಮುದ್ರ ಪಾಲಾಗಿದ್ದರು.

ತಕ್ಷಣ ಎಚ್ಚೆತ್ತುಕೊಂಡ ಲೈಫ್‌ ಗಾರ್ಡ್‌ ಸಿಬ್ಬಂದಿ ಸಮುದ್ರಕ್ಕೆ ದುಮುಕಿ ಧ್ಯಾನ್ ಬಂಜನ್ ರನ್ನು ರಕ್ಷಿಸಿ ಸುರತ್ಕಲ್‌ ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಅಲ್ಲಿ ಮೃತಪಟ್ಟರೆಂದು ತಿಳಿದು ಬಂದಿದೆ. ಸದ್ಯ ಅನೀಶ್‌ ಕುಲಾಲ್‌ ಸಮುದ್ರದಲ್ಲಿ ನಾಪತ್ತೆಯಾಗಿದ್ದು ಆತನಿಗಾಗಿ ಸ್ಥಳೀಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಜೀವ ರಕ್ಷಕರ ತಂಡ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿದು ಬಂದಿದೆ.

ಸೂರಿಂಜೆಯ ಪ್ರಖ್ಯಾತ್‌ರ ಮನೆಯಲ್ಲಿ ನಾಪತ್ತೆಯಾಗಿರುವ ಅನೀಶ್‌ ಕುಲಾಲ್‌ ರ ದೊಡ್ಡಪ್ಪನ ಮಗಳ ವಿವಾಹ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುಂಬೈನಿಂದ ಸಂಬಂಧಿಕರು ಬಂದಿದ್ದರು. ಸೋಮವಾರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆದಿತ್ತು. ಬುಧವಾರ ಮೂಡುಬಿದಿರೆಯಲ್ಲಿ ಮದುವೆ ಕಾರ್ಯಕ್ರಮ ನಡೆಯಲಿತ್ತು. ಈ ನಡುವೆ ಈ ದುರಂತ ಕುಟುಂಭಕ್ಕೆ ಭಾರೀ ಆಘಾತವನ್ನುಂಟು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News