ಸುರತ್ಕಲ್| ಎಂಆರ್‌ಪಿಎಲ್ ಸಿಬ್ಬಂದಿಯನ್ನು ದಿಗ್ಬಂಧನದಲ್ಲಿರಿಸಿದ ಉತ್ತರ ಪ್ರದೇಶದ ಗ್ರಾಮಸ್ಥರು
ಸುರತ್ಕಲ್: ಎಂಆರ್‌ಪಿಎಲ್ ನಲ್ಲಿ ಎಚ್ 2ಎಸ್ ವಿಷಾನಿಲ ಸೇವಿಸಿ ಮೃತಪಟ್ಟಿದ್ದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಿವಾಸಿ ದೀಪ್ ಚಂದ್ ಅವರ ಮೃತದೇಹವನ್ನು ನಿವಾಸಕ್ಕೆ ತಲುಪಿಸಲು ಹೋಗಿದ್ದ ಎಂಆರ್‌ಪಿಎಲ್ ನ 6 ಮಂದಿ ಸಿಬ್ಬಂದಿಯನ್ನು ಗ್ರಾಮಸ್ಥರು ದಿಗ್ಬಂಧನದಲ್ಲಿರಿಸಿದ ಘಟನೆ ಇಂದು ವರದಿಯಾಗಿದೆ.
ಎಂಆರ್‌ಪಿಎಲ್ ಉದ್ಯೋಗಿಗಳಾದ ಪ್ರಸಾದ್, ಬಿಲ್ದಾರ್, ಸುರೇಂದರ್, ಬಾಳನಾರಾಯಣ, ಪಂಕಜ್ ಮತ್ತು ಇನ್ನೋರ್ವನನ್ನು ಗ್ರಾಮಸ್ಥರು ದಿಗ್ಬಂಧನದಲ್ಲಿರಿಸಿದ್ದಾರೆ ಎಂದು ತಿಳಿದು ಬಂದಿದೆ.
ದೀಪ್ ಚಂದ್ ಶನಿವಾರ ಎಂಆರ್‌ಪಿಎಲ್ ನಲ್ಲಿ ನಡೆದಿದ್ದ ವಿಷಾನಿಲ ಸೋರಿಕೆಯಿಂದ ಮೃತಪಟ್ಟಿದ್ದರು. ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ರವಿವಾರ ಬೆಳಗ್ಗೆ ಮೃತದೇಹವನ್ನು ಉತ್ತರ ಪ್ರದೇಶಕ್ಕೆ ರವಾನಿಸಲಾಗಿತ್ತು.
ಮಂಗಳೂರಿನಿಂದ ಬೆಂಗಳೂರಿಗೆ ಮಾರ್ಗ ಮೂಲಕ ಸಂಚರಿಸಿ ಬಳಿಕ ವಿಮಾನದ ಮೂಲಕ ದೀಪ್ ಚಂದ್ ಅವರ ನಿವಾಸಕ್ಕೆ ತರಲಾಗಿತ್ತು. ಆದರೆ, ಮನೆಯವರು ಮತ್ತು ಗ್ರಾಮಸ್ಥರು, ಮನೆಯ ಸದಸ್ಯರೊಬ್ಬರಿಗೆ ಎಂಆರ್ ಪಿಎಲ್ ನಲ್ಲಿ ಉದ್ಯೋಗ ನೀಡಬೇಕು ಮತ್ತು ಅತೀ ಹೆಚ್ವಿನ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮೃತದೇಹವನ್ನು ಪಡೆದುಕೊಳ್ಳಲು ನಿರಾಕರಿಸಿದ್ದಾರೆ.
ಮೃತದೇಹದೊಂದಿಗೆ ತೆರಳಿದ್ದ ಪ್ರಸಾದ್, ಬಿಲ್ದಾರ್, ಸುರೇಂದರ್, ಬಾಳನಾರಾಯಣ, ಪಂಕಜ್ ಮತ್ತು ಇನ್ನೋರ್ವನನ್ನು ದಿಗ್ಬಂಧನದಲ್ಲಿರಿಸಿದ್ದರು. ಅಲ್ಲದೆ, ಅವರ ಮೊಬೈಲ್ ಗಳನ್ನೂ ವಶಕ್ಕೆ ಪಡೆದು ಕೊಂಡಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ʼವಾರ್ತಾಭಾರತಿʼ ಸತತ ಕರೆಗಳ ಮೂಲಕ ದಿಗ್ಬಂಧನದಲ್ಲಿದ್ದವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಈ ವೇಳೆ ಸಂಪರ್ಕಕ್ಕೆ ಸಿಕ್ಕಿದ ಮಂಗಳೂರು ಮೂಲದ ಎಂಆರ್ ಪಿಎಲ್ ಉದ್ಯೋಗಿ ಪ್ರಸಾದ್ ಅವರು, ನಾವು ಸಹೋದ್ಯೋಗಿಯ ಮೃತದೇಹವನ್ನು ಅವರ ನಿವಾಸಕ್ಕೆ ತಲುಪಿಸುವ ಸಲುವಾಗಿ ಇಲ್ಲಿಗೆ ಬಂದಿದ್ದೇವೆ. ಆದರೆ, ಅವರಿಗೆ ಪರಿಹಾರ ಮತ್ತು ಕುಟುಂಬ ಸದಸ್ಯರೊಬ್ಬರಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ನಮ್ಮನ್ನು ದಿಗ್ಬಂಧನದಲ್ಲಿರಿಸಿದ್ದಾರೆ. ಈ ಬಗ್ಗೆ ಸಂಸ್ಥೆಯ ಎಚ್ ಆರ್ ಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಬಂದು ಅವರಿಗೆ ತಿಳಿ ಹೇಳುವ ಕೆಲಸ ಮಾಡಿತ್ತಿದ್ದಾರೆ ಎಂದು ಹೇಳಿದರು.
"ಪರಿಹಾರ ಮತ್ತು ಉದ್ಯೋಗ ನೀಡುವುದು ಕಂಪೆನಿ, ನಾವಲ್ಲ. ನಾವು ಅವರ ಸಹೋದ್ಯೋಗಿಗಳು, ಅಧಿಕಾರಿಗಳಲ್ಲ ಎಂದು ಎಷ್ಟೇ ಹೇಳಿದರೂ ಅವರು ಕೇಳುತ್ತಿಲ್ಲ. ನಮ್ಮ ಮೊಬೈಲ್ ಗಳನ್ನೂ ಕಸಿದು ಕೊಳ್ಳಲಾಗಿತ್ತು. ಪೊಲೀಸರ ಮಧ್ಯಪ್ರವೇಶದ ಬಳಿಕವಷ್ಟೇ ನಾವು ಕಂಪೆನಿಯನ್ನು ಸಂಪರ್ಕಿಸಲು ಸಾಧ್ಯವಾಯಿತು".
-ಪ್ರಸಾದ್, ಎಂಆರ್‌ಪಿಎಲ್ ಉದ್ಯೋಗಿ