ಉಪ್ಪಿನಂಗಡಿ | ಬಾಲಕಿಯ ಸಾವಿನ ಬಗ್ಗೆ ಅನುಮಾನ: ಹೆತ್ತವರಿಂದ ಪೊಲೀಸರಿಗೆ ದೂರು
ಮಂಗಳೂರು: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೀಟ ನಾಶಕ ಸೇವಿಸಿ ಆಸ್ಪತ್ರೆ ಸೇರಿದ್ದ ಬಾಲಕಿಯೊಬ್ಬಳು ಆಸ್ಪತ್ರೆ ಸೇರಿದ್ದ ಶಾಲಾ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಆಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮೃತ ಬಾಲಕಿಗೆ ಕಡಬ ನಿವಾಸಿಯೊಬ್ಬನೊಂದಿಗೆ ಫೋನ್ ಸಂಪರ್ಕವಿತ್ತು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಕೆಯ ತಂದೆ ತಿಳಿಸಿದ್ದಾರೆ.
ಸ್ಥಳೀಯ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದ ಆಕೆ ನ. 4ರಂದು ತಲೆನೋವು ಎಂದು ಕಾರಣ ನೀಡಿ ಶಾಲೆಗೆ ಹೋಗದೆ ಮನೆಯಲ್ಲಿದ್ದಳು. ಮನೆಯಿಂದ ಹೆತ್ತವರು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಬಾಲಕಿ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಗೊಂಡಿದ್ದಳು. ಕೂಲಿ ಕೆಲಸಕ್ಕೆ ಹೋಗಿದ್ದ ಆಕೆಯ ತಾಯಿ ಮನೆಗೆ ವಾಪಸ್ ಬಂದಾಗ ಮಗಳು ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಗೊತ್ತಾಗಿ ತಕ್ಷಣ ಆಕೆಯನ್ನು ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬಳಿಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಾಲಕಿ ನ.12 ರಂದು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಳೆ.
ಆಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.