ತಲಪಾಡಿ : ಫಲಾಹ್ ಪ್ರೌಢ ಶಾಲೆ ಆಶ್ರಯದಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿ ಕಾರ್ಯಾಗಾರ
ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ
ಉಳ್ಳಾಲ: ಫಲಾಹ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢ ಶಾಲೆ, ವಿದ್ಯಾನಗರ ತಲಪಾಡಿ ಇದರ ಆಶ್ರಯದಲ್ಲಿ ಪೋಷಕರ ಸಭೆ, ಪ್ರತಿಭಾ ಪುರಸ್ಕಾರ, ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿ ಕಾರ್ಯಾಗಾರ ಹಾಗೂ ಸನ್ಮಾನ ಕಾರ್ಯಕ್ರಮವು ಫಲಾಹ್ ಹೊರಾಂಗಣ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಈಶ್ವರ್ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ನಿರೀಕ್ಷಕ ಕೃಷ್ಣಾನಂದ ಜಿ. ನಾಯಕ್ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ, ಅಪ್ರಾಪ್ತ ವಿದ್ಯಾರ್ಥಿಗಳಿಗೆ ವಾಹನ ನೀಡಬಾರದು ಎಂದು ಪೋಷಕರಿಗೆ ಸೂಚಿಸಿದರು.
ಫಲಾಹ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯು.ಬಿ. ಮೊಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ತಲಪಾಡಿ ವಲಯದ ಸಿಆರ್‌ಪಿ ಸುಜಾತಾ ಮಾತನಾಡಿದರು.
ಈ ಸಂದರ್ಭದಲ್ಲಿ ಉಳ್ಳಾಲ ತೋಟದ ಯು.ಟಿ. ಅಬ್ದುಲ್ ರಹೀಮ್ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಅತ್ಯಧಿಕ ಅಂಕ ಗಳಿಸಿದ ಹಾಗೂ ಶಾಲಾ ವಠಾರದಲ್ಲಿ ಕೃಷಿ ಬೆಳೆಗಳನ್ನು ಬೆಳೆಸುವಲ್ಲಿ ಉತ್ತೇಜನ ನೀಡಿದ ಫಲಾಹ್ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಫಲಾಹ್ ವಿದ್ಯಾ ಸಂಸ್ಥೆಯ ಕೋಶಾಧಿಕಾರಿ ಹಾಜಿ ಅಬ್ಬಾಸ್ ಮಜಲ್, ಪ್ರಧಾನ ಕಾರ್ಯದರ್ಶಿ ಹಾಜಿ ಎನ್. ಅರಬಿ ಕುಂಞಿ, ಬಶೀರ್ ತಲಪಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಿಕ್ಷಕಿ ಚಂದ್ರಕಲಾ ಎಂ. ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕ ಮೊಹಮ್ಮದ್ ರಫೀಕ್ ಸ್ವಾಗತಿಸಿ ವಂದಿಸಿದರು.