ಲಕ್ಕಿ ಸ್ಕೀಮ್‌ಗಳಲ್ಲಿ ಸಂತ್ರಸ್ತರು ತೊಡಗಿಸಿದ್ದ ಹಣವನ್ನು ಜಿಲ್ಲಾಡಳಿ ಹಿಂದಿರುಗಿಸಲು ಕ್ರಮವಹಿಸಬೇಕು: ಸಿಪಿಐಎಂ
ಸುರತ್ಕಲ್: ಲಕ್ಕಿ ಸ್ಕೀಮ್ ಹೆಸರಿನಲ್ಲಿ ಜನರಿಗೆ ಮೋಸಮಾಡಿ ಕೋಟಿ ಕೋಟಿ ರೂ. ವಂಚಿಸಿದ ನ್ಯೂ ಶೈನ್ ಹಾಗೂ ನ್ಯೂ ಇಂಡಿಯಾ ಸ್ಕೀಂನ ಆಯೋಜಕರನ್ನು ಸುರತ್ಕಲ್ ಪೊಲೀಸರು ಬಂಧಿಸಿರುವುದು ಶ್ಲಾಘನೀಯ. ಅದೇ ರೀತಿ ಸ್ಕೀಮ್‌ಗಳಿಗೆ ಸಂತ್ರಸ್ತರು ತೊಡಗಿಸಿದ್ದ ಹಣವನ್ನು ಜಿಲ್ಲಾಡಳಿಯ ಹಿಂದಿರುಗಿಸಲು ಶೀಘ್ರ ಕ್ರಮವಹಿಸಬೇಕೆಂದು ಸಿಪಿಐಎಂ ಆಗ್ರಹಿಸಿದೆ.
ಲಕ್ಕಿ ಸ್ಕೀಂ ಹೆಸರಿನಲ್ಲಿ ಬಂಪರ್ ಬಹುಮಾನ, ಕಟ್ಟಿದ ಹಣದ ಮೌಲ್ಯಕ್ಕೆ ತಕ್ಕುದಾದ ವಸ್ತುಗಳನ್ನು ನೀಡುವ ಆಮಿಷ ಒಡ್ಡಿ ಸಾವಿರಾರು ಸಂಖ್ಯೆಯ ಜನರಿಂದ ಕೋಟಿ, ಕೋಟಿ ರೂ. ಸಂಗ್ರಹಿಸಿದ ಲಕ್ಕಿ ಸ್ಕೀಂ ಗಳಲ್ಲಿ ಕೆಲವೊಂದು ಆಯೋಜಕರು ಸ್ಕೀಂ ಕೊನೆಗೊಂಡ ತರುವಾಯ ವಸ್ತುಗಳನ್ನು ನೀಡದೆ ವಂಚಿಸಿರುವುದು ವರದಿಯಾಗಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ದ.ಕ., ಉಡುಪಿ ಹಾಗೂ ಹತ್ತಿರದ ಜಿಲ್ಲೆಗಳನ್ನು ಕೇಂದ್ರೀಕರಿಸಿ ಲಕ್ಕಿಸ್ಕೀಮ್ ಗಳು ದೊಡ್ಡ ಪ್ರಮಾಣದಲ್ಲಿ ತಲೆ ಎತ್ತಿವೆ. ಏಜಂಟರುಗಳ ಮೂಲಕ ಹತ್ತಾರು ಸಾವಿರ ಜನರನ್ನು ಸದಸ್ಯರನ್ನಾಗಿಸಿ ನೂರಾರು ಕೋಟಿ ರೂಪಾಯಿಯನ್ನು ಸಂಗ್ರಹಿಸಿವೆ. ಪ್ರತಿ ತಿಂಗಳ ಡ್ರಾದಲ್ಲಿ ಆಯ್ಕೆಯಾದ ಅಧೃಷ್ಟಶಾಲಿಗಳಿಗೆ ಮನೆ, ಫ್ಲಾಟ್, ಐಷಾರಾಮಿ ಕಾರುಗಳನ್ನು ಬಹುಮಾನವಾಗಿ ವಿತರಿಸುವುದು, ಬಹುಮಾನ ಸಿಗದೇ ಬಾಕಿ ಉಳಿದ ವರಿಗೆ ಅವರು ಕಟ್ಟಿದ ಮೌಲ್ಯದಷ್ಟು ಹಣದ ವಸ್ತುಗಳನ್ನು ನೀಡುವುದು ಈ ಸ್ಕೀಂ ಗಳಿಗೆ ಇರುವ ಆಕರ್ಷಣೆ. ಆಯೋಜಕರ ಆಕರ್ಷಕ ಮಾತುಗಳು, ಸ್ಥಳೀಯವಾದ ಪರಿಚಿತ ಏಜಂಟರು, ಸ್ಕೀಂ ನಡೆಸುವವರ ದಾನ, ಧರ್ಮದ ಚಾರಿಟಿಗಳು, ದುಬಾರಿ ವೆಚ್ಚದ ಕ್ರೀಡಾಕೂಟ, ಸಾಮೂಹಿಕ ವಿವಾಹಗಳು, ಕಣ್ಣು ಕುಕ್ಕುವ ರೀತಿಯ ಐಷಾರಾಮಿ ನಡವಳಿಕೆಗಳು, ವೇದಿಕೆಗಳಲ್ಲಿ ಪ್ರಭಾವಿ ರಾಜಕಾರಣಿಗಳು, ಜನಪ್ರತಿನಿಧಿಗಳು, ಜನಪ್ರಿಯ ನಟರು, ಸಾಮಾಜಿಕ ಜಾಲತಾಣದ ಸೆಲೆಬ್ರಿಟಿಗಳು, ಧಾರ್ಮಿಕ ಕ್ಷೇತ್ರದ ಮುಂದಾಳುಗಳನ್ನು ಕರೆಸಿ ವಿಜೃಂಭಿಸುವ ಮೂಲಕ ಕಡಿಮೆ ಆದಾಯದ ಜನ ಸಾಮಾನ್ಯರನ್ನು ಈ ಸ್ಕೀಮ್ ಗಳು ಸುಲಭವಾಗಿ ಕೃತಕ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡು ಬಲೆಗೆ ಕೆಡವಿಕೊಂಡಿವೆ.
ಯಾವುದೆ ಪ್ರಾಧಿಕಾರಗಳಿಂದ ಸರಿಯಾದ ಅನುಮತಿಗಳನ್ನು ಪಡೆಯದೆ, ಕಾನೂನಿನ ದುರ್ಬಲ ಅಂಶಗಳನ್ನು ಬಳಸಿಕೊಂಡು ನಡೆಸಿರುವ ಸ್ಕೀಮ್ ಗಳ ಕುರಿತು ಸಂಬಂಧ ಪಟ್ಟ ಇಲಾಖೆಗಳು ಆಯಾಯ ಸಂದರ್ಭದಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದು ಈಗ ನೂರಾರು ಕೋಟಿಗಳ ದೊಡ್ಡ ಮಟ್ಟದ ವಂಚನೆ ನಡೆಸಲು, ಸಾಮಾನ್ಯ ಜನತೆ ಹಣ ಕಳೆದುಕೊಳ್ಳಲು ಕಾರಣವಾಗಿದೆ. ಈಗ ಒಂದಿಬ್ಬರು ಸಂತ್ರಸ್ತರು ನೀಡಿದ ದೂರಿನ ಬಳಿಕ ಸುರತ್ಕಲ್ ಠಾಣಾಧಿಕಾರಿಗಳು ಯಾವುದೇ ಪ್ರಭಾವಗಳಿಗೆ ಮಣಿಯದೆ ನ್ಯೂ ಶೈನ್ ಹಾಗೂ ನ್ಯೂ ಇಂಡಿಯಾ ಸ್ಕೀಮ್ ಗಳ ಆಯೋಜಕರನ್ನು ಬಂಧಿಸಿ ಸರಿಯಾದ ಕಾನೂನು ಕ್ರಮಗಳನ್ನು ಜರುಗಿಸಿದ್ದಾರೆ. ಆದರೆ, ತಮ್ಮ ಶ್ರಮದ ದುಡಿಮೆಯ ಹಣವನ್ನು ತೊಡಗಿಸಿರುವ ಸಂತ್ರಸ್ತರಿಗೆ ಅವರು ಕಟ್ಟಿದ ಹಣ ಮರಳಿ ಸಿಗುವ ಸಾಧ್ಯತೆಗಳು ಕಾಣುತ್ತಿಲ್ಲ ಎಂದು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಎರಡು ಸ್ಕೀಮ್ ಗಳಲ್ಲದೆ, ಇದೇ ಮಾದರಿಯ, ಅಥವಾ ಬೇರೆ ರೂಪದ 50ಕ್ಕೂ ಹೆಚ್ಚು ಲಕ್ಕಿ ಸ್ಕೀಮ್ ಗಳು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಾ ಬೃಹತ್ ಪ್ರಮಾಣದ ಹಣಕಾಸು ಸಂಗ್ರಹ ಮಾಡಿವೆ. ಈ ಸ್ಕೀಮ್ ಗಳಲ್ಲಿ ಹಣ ತೊಡಗಿಸಿಕೊಂಡವರಿಗೆ ಈಗ ಆತಂಕ ಕಾಡತೊಡಗಿವೆ. ಜಿಲ್ಲಾಡಳಿತ ಈ ಕುರಿತು ಗಮನ ಹರಿಸಿ ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಾ ಲಕ್ಕಿ ಸ್ಕೀಮ್ ಗಳನ್ನು ಪರಿಶೀಲನೆಗೆ ಒಳಪಡಿಸಬೇಕು, ಅವರ ಹೂಡಿಕೆಗಳ ದಾಖಲೆ ಪಡೆದು ನಿಗಾ ವಹಿಸಬೇಕು. ಈಗಾಗಲೇ ಬಾಗಿಲು ಎಳೆದಿರುವ, ಮೊಕದ್ದಮೆ ದಾಖಲಾಗಿರುವ, ಅಥವಾ ವಂಚನೆಯ ಸಾಧ್ಯತೆ ಇರುವ ಪ್ರಕರಣಗಳಲ್ಲಿ, ಸಮಿತಿಯೊಂದನ್ನು ರಚಿಸಬೇಕು, ವಂಚಕ ಸ್ಕೀಮ್ ಗಳ ಹೂಡಿಕೆ ಗಳನ್ನು ಪತ್ತೆ ಹಚ್ಚಿ ಅವುಗಳ ಮಾರಾಟದಿಂದ ಬರುವ ಹಣವನ್ನು ಸಂತ್ರಸ್ತರಿಗೆ ಅವರು ಪಾವತಿ ಮಾಡಿದ ಮೌಲ್ಯಗಳಿಗೆ ಅನುಗುಣವಾಗಿ ವಿತರಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಇದಲ್ಲದೆ, ವಂಚನೆಯ ಸಾಧ್ಯತೆಯ ಅರಿವಿದ್ದೂ, ಇಂತಹ ವಂಚಕ ಲಕ್ಕಿಸ್ಕೀಮ್ ಗಳ ವೇದಿಕೆ ಹತ್ತಿದ, ಪ್ರಮೋಷನ್ ಮಾಡಿದ, ವಿಶ್ವಾಸಾರ್ಹತೆ ಒದಗಿಸಿದ ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಮುಂದಾಳುಗಳು, ಬಡವರು ಹಣ ಕಳೆದುಕೊಂಡಿರುವ ಪ್ರಕರಣಗಳ ಕುರಿತು ಕನಿಷ್ಠ ನೈತಿಕ ಹೊಣೆಯನ್ನು ಹೊರಬೇಕು, ಇನ್ನು ಮುಂದೆ ಆದರೂ ಜವಾಬ್ದಾರಿಯುತವಾಗಿ ನಡೆದು ಕೊಳ್ಳಬೇಕು ಎಂದು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.