ಉಪ್ಪಿನಂಗಡಿ | ರಸ್ತೆ ಕೆಸರುಮಯ : ಸಂಚಾರಕ್ಕೆ ಪರದಾಟ
ಉಪ್ಪಿನಂಗಡಿ: ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಆದರ್ಶನಗರ–ದರ್ಬೆ ರಸ್ತೆಯ ಕಜೆ ಪ್ರದೇಶದಲ್ಲಿ ಗುಡ್ಡ ಕುಸಿತದಿಂದ ತೆರವಾದ ಮಣ್ಣನ್ನು ರಸ್ತೆ ಬದಿಯಲ್ಲಿ ಹಾಕಿರುವುದರಿಂದ, ಮಳೆ ಬಂದಾಗ ಮಣ್ಣು ಕರಗಿ ರಸ್ತೆಯಲ್ಲೇ ಹರಿದು ರಸ್ತೆ ಸಂಪೂರ್ಣ ಕೆಸರುಮಯವಾಗುತ್ತಿದೆ. ಇದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಳೆಗಾಲದ ಆರಂಭದಲ್ಲಿ ರಸ್ತೆ ಬದಿಯ ತಡೆಗೋಡೆಯೊಂದು ಧರೆಸಹಿತ ಕುಸಿದು ಬಿದ್ದಿತ್ತು. ನಂತರ ಮಳೆಗಾಲ ಕೊನೆಯ ಹಂತದಲ್ಲಿ ಮಣ್ಣಿನಲ್ಲಿ ಸಿಲುಕಿದ್ದ ತಡೆಗೋಡೆಯ ಬಳಿಯ ಮಣ್ಣನ್ನು ತೆಗೆಯಲಾಗಿದ್ದು, ಅದನ್ನು ರಸ್ತೆ ಬದಿಯಲ್ಲಿಯೇ ರಾಶಿಯಾಗಿ ಹಾಕಲಾಗಿದೆ. ಈಗ ಮಳೆ ಬಂದಾಗ ಆ ಮಣ್ಣು ಮಳೆ ನೀರಿನೊಂದಿಗೆ ಕರಗಿ ರಸ್ತೆಯ ಮಧ್ಯೆ ಹರಿಯುತ್ತಿದೆ.
ಮೊದಲೇ ಇಳಿಜಾರಾದ ಈ ರಸ್ತೆಯಲ್ಲಿ ಮಣ್ಣು ಹರಿದು ಸಂಪೂರ್ಣ ಕೆಸರುಮಯವಾಗಿದ್ದು, ಸಂಚಾರದ ವೇಳೆ ವಾಹನಗಳು ಜಾರುವ ಅಪಾಯ ಎದುರಾಗುತ್ತಿದೆ. ಬಿಸಿಲಿನ ಸಮಯದಲ್ಲಿ ಈ ಮಣ್ಣು ಒಣಗಿ, ವಾಹನ ಸಂಚಾರದಿಂದ ಸಂಪೂರ್ಣ ಪ್ರದೇಶ ಧೂಳುಮಯವಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಕುರಿತು ಗ್ರಾಮ ಪಂಚಾಯತ್‌ಗೆ ಮೌಖಿಕವಾಗಿ ಹಲವು ಬಾರಿ ಮಾಹಿತಿ ನೀಡಿದರೂ, ಯಾವುದೇ ಕ್ರಮ ಕೈಗೊಳ್ಳದ ಕಾರಣ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆ ಬದಿಯಲ್ಲಿರುವ ಮಣ್ಣನ್ನು ಕೂಡಲೇ ತೆರವುಗೊಳಿಸಿ, ಚರಂಡಿ ಸರಿಯಾಗಿ ಬಿಡಿಸಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.