×
Ad

ರೌಡಿ ಶೀಟರ್ ಒಬ್ಬನ ಜೀವಕ್ಕೆ ಕೊಡುವ ಕಾಳಜಿಯನ್ನು ಸರಕಾರ ಅಮಾಯಕರ ಜೀವಕ್ಕೆ ಯಾಕೆ ಕೊಡುತ್ತಿಲ್ಲ : SDPI ಪ್ರಶ್ನೆ

Update: 2025-06-09 15:38 IST

ಮಂಗಳೂರು: ನಗರದ ಹೊರವಲಯದ ಕುಡುಪುವಿನಲ್ಲಿ ಗುಂಪು ದಾಳಿಯ ಮೂಲಕ ಹತ್ಯೆಯಾದ ಕೇರಳದ ವಯನಾಡಿನ ಅಶ್ರಫ್ ಹಾಗೂ ಬಜರಂಗದಳದ ಕಾರ್ಯಕರ್ತ ದೀಪಕ್ ಮತ್ತು ತಂಡದಿಂದ ವಂಚನೆಯ ಮೂಲಕ ಅಮಾನುಷವಾಗಿ ಕೊಲೆಯಾದ ಬಂಟ್ವಾಳ ತಾಲೂಕಿನ ಕೊಳ್ತಮಜಲು ಅಬ್ದುಲ್ ರಹಿಮಾನ್ ಹತ್ಯೆ ಹಾಗೂ ದಲಿತ ಯುವಕ ಕೀರ್ತಿ ಮತ್ತು ಫಾಝಿಲ್ ಕೊಲೆ ಪ್ರಕರಣದ A1 ಆರೋಪಿಯಾಗಿರುವ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ರೌಡಿಶೀಟರ್ ಒಬ್ಬನ ಜೀವಕ್ಕೆ ಕೊಡುವ ಕಾಳಜಿ ಮತ್ತು ಮಹತ್ವ ಸರಕಾರ ಅಮಾಯಕ ಮುಸ್ಲಿಂ ಯುವಕರ ಜೀವಕ್ಕೆ ಯಾಕೆ ಕೊಡುತ್ತಿಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೇಲಿನ ಎರಡೂ ಪ್ರಕರಣ ನಡೆದಾಗ ನಮ್ಮ ಪಕ್ಷ ಸೇರಿದಂತೆ ಹಲವಾರು ಪ್ರಗತಿಪರರು,ಸಾಮಾಜಿಕ, ದಾರ್ಮಿಕ ಸಂಘಟನೆಗಳ ಮುಖಂಡರು ಆರೋಪಿಗಳ ಮೇಲೆ ಕಠಿಣ ಕಾಯ್ದೆ ದಾಖಲಿಸಿ ಉನ್ನತ ಮಟ್ಟದ ತನಿಖೆ ವಹಿಸಬೇಕೆಂದು ಒತ್ತಾಯಿಸಿದ್ದೆವು. ಆದರೆ ರಾಜ್ಯ ಸರ್ಕಾರ ಅದನ್ನು ಕಡೆಗಣಿಸಿತ್ತು ಎಂದು ಆರೋಪಿಸಿದ್ದಾರೆ.

ಅಶ್ರಫ್ ಹಾಗೂ ರಹಿಮಾನ್ ಹತ್ಯೆ ಪ್ರಕರಣವನ್ನು ಬಿಟ್ಟು ಗ್ಯಾಂಗ್ ವಾರ್ ನಿಂದ ಹತ್ಯೆಯಾದ ಕೀರ್ತಿ ಹಾಗೂ ಫಾಝಿಲ್ ಕೊಲೆಯ A1 ಆರೋಪಿಯಾಗಿರುವ ಸುಹಾಸ್ ಶೆಟ್ಟಿ ಹತ್ಯೆಯ ತನಿಖೆಯನ್ನು ಮಾತ್ರ ಕೇಂದ್ರ ಸರ್ಕಾರ NIA ಗೆ ಒಪ್ಪಿಸಿ ಸಂಘಪರಿವಾರ ಕಾರ್ಯಕರ್ತರನ್ನು ಮೆಚ್ಚಿಸಲು ಹೊರಟಿದೆ. ರಾಜ್ಯ ಸರ್ಕಾರ ಮೊದಲೇ ಈ ಎರಡೂ ಮುಸ್ಲಿಂ ಯುವಕರ ಕೊಲೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತ‌ನಿಖೆಗೆ ವಹಿಸಿದ್ದರೆ ಪ್ರಕರಣದಲ್ಲಿ ತಾರತಮ್ಯವಾಗುತ್ತಿರಲಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಮೂರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ಪರಿಣಿತ ಹಾಗೂ ಅನುಭವಿ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ SIT ಮೂಲಕ ತನಿಖೆ ನಡೆಸಬೇಕೆಂದು ಅನ್ವರ್ ಸಾದತ್ ಬಜತ್ತೂರು ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News