ಜ.16: ಮಂಗಳೂರಿನಲ್ಲಿ ಸಿಲಿಕಾನ್ ಬೀಚ್ ಸ್ಟಾರ್ಟಪ್ ಸಮಾವೇಶ -TiECon ಮಂಗಳೂರು 2026
ಟೈ(TiE) ಮಂಗಳೂರು ವತಿಯಿಂದ ಆಯೋಜಿಸಲಾಗುವ 'ಟೈಕಾನ್ ಮಂಗಳೂರು 2026' ಸಮಾವೇಶದಲ್ಲಿ 500ಕ್ಕೂ ಅಧಿಕ ಪ್ರತಿನಿಧಿಗಳು, 50ಕ್ಕೂ ಅಧಿಕ ಹೂಡಿಕೆದಾರರು, 40ಕ್ಕೂ ಅಧಿಕ ಆಹ್ವಾನಿತ ಗಣ್ಯರು ಮತ್ತು *30ಕ್ಕೂ ಅಧಿಕ ಸ್ಟಾರ್ಟಪ್ ಪ್ರದರ್ಶಕರು ಭಾಗವಹಿಸುವರು.
ಮಂಗಳೂರು, ಜ.8: ರಾಷ್ಟ್ರೀಯ ಸ್ಟಾರ್ಟಪ್ ದಿನವಾಗಿರುವ ಜ.16ರಂದು ಸಿಲಿಕಾನ್ ಬೀಚ್ ಸ್ಟಾರ್ಟಪ್ ಸಮಾವೇಶ 'ಟೈಕಾನ್ ಮಂಗಳೂರು 2026' ಮಂಗಳೂರಿನ ಡಾ.ಟಿ.ಎಂ.ಎ. ಪೈ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆಯಲಿದೆ ಎಂದು ಟೈ ಮಂಗಳೂರು ಚಾಪ್ಟರ್ ಸ್ಥಾಪಕ ಅಧ್ಯಕ್ಷ ರೋಹಿತ್ ಭಟ್ ತಿಳಿಸಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಟೈ(TiE) ಎಂದು ಪ್ರಖ್ಯಾತವಾಗಿರುವ ಅಂತರ್ ರಾಷ್ಟ್ರೀಯ ಉದ್ಯಮ ಉತ್ತೇಜನ ಸಂಸ್ಥೆ ದಿ ಇಂಡಸ್ ಎಂಟರ್ ಪ್ರನರ್ಸ್ ಇದರ ಮಂಗಳೂರು ಚಾಪ್ಟರ್ 'ಟೈಕಾನ್ ಮಂಗಳೂರು ಸಮಾವೇಶ'ವನ್ನು ಆಯೋಜಿಸುತ್ತಿದ್ದು, ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ (ಕೆಡಿಇಎಂ ) ಹಾಗೂ ಸಿಲಿಕಾನ್ ಬೀಚ್ ಪ್ರೋಗ್ರಾಮ್ ಇದರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಮಾವೇಶದಲ್ಲಿ ದೇಶ-ವಿದೇಶಗಳಿಂದ 500ಕ್ಕೂ ಅಧಿಕ ಉದ್ಯಮಿಗಳು, ಹೂಡಿಕೆದಾರರು, ಕಾರ್ಪೊರೇಟ್ ನಾಯಕರು, ಪಾಲಿಸಿ ತಜ್ಞರು ಹಾಗೂ ಸೃಜನಶೀಲ ನವೋದ್ಯಮಿಗಳು ಭಾಗವಹಿಸುತ್ತಿದ್ದು, ಸುಮಾರು 30ಕ್ಕೂ ಅಧಿಕ ಸ್ಟಾರ್ಟಪ್ ಗಳು ಸಮಾವೇಶದ ಅಂಗವಾಗಿ ಜರುಗಲಿರುವ ಪ್ರದರ್ಶಿನದಲ್ಲಿ ತಮ್ಮ ಉದ್ಯಮಗಳನ್ನು ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು.
ಕರಾವಳಿ ಕರ್ನಾಟಕವು ಸೃಜನಶೀಲ ಉದ್ಯಮಿಗಳು ಹಾಗೂ ಹೂಡಿಕೆದಾರರಿಗೆ ಆಕರ್ಷಕ ತಾಣವಾಗಿ ಹೊರಹೊಮ್ಮುತ್ತಿರುವುದನ್ನು ಜಗತ್ತಿಗೆ ತೋರಿಸುವ, ಆಮೂಲಕ ಉತ್ತೇಜಿಸುವ ಉದ್ದೇಶವನ್ನು ಸಮಾವೇಶ ಹೊಂದಿದೆ ಎಂದವರು ಹೇಳಿದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಮಾಹಿತಿ ತಂತ್ರಜ್ಞಾನ -ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ, ಭಾರತ ಸರಕಾರದ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಎಸ್.ಕೃಷ್ಣನ್, ಕರ್ನಾಟಕ ಸರಕಾರದ ಮಾಹಿತಿ - ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ, ಕಿಯಾನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಪದ್ಮಶ್ರೀ ಪುರಸ್ಕೃತ ಉದ್ಯಮಿ ಪ್ರಶಾಂತ್ ಪ್ರಕಾಶ್, ಟೈ ಗ್ಲೋಬಲ್ ಅಧ್ಯಕ್ಷ ಮುರಳಿ ಬುಕ್ಕಪಟ್ನಮ್, 3 ವನ್ 4 ಕ್ಯಾಪಿಟಲ್ ಅಧ್ಯಕ್ಷ ಟಿ.ವಿ.ಮೋಹನದಾಸ ಪೈ, ಡೆಲೊಯ್ಟ್ ಸೌತ್ ಏಶ್ಯ ಸಿಇಒ ರೋಮಲ್ ಶೆಟ್ಟಿ, ಬಾಲಿವುಡ್ ನಟ ಹಾಗೂ ಉದ್ಯಮಿ ಸುನೀಲ್ ಶೆಟ್ಟಿ, ಕೆಡೆಮ್ ಅಧ್ಯಕ್ಷ ಬಿ.ವಿ.ನಾಯ್ಡು, ಕೆಡೆಮ್ ಸಿಇಒ ಸಂಜೀವ ಗುಪ್ತ ಭಾಗವಹಿಸುವರು.
ಭಾರತದ ಸಿಲಿಕಾನ್ ಬೀಚ್ ಎಂದೇ ಖ್ಯಾತಿ ಪಡೆಯುತ್ತಿರುವ ಮಂಗಳೂರು - ಉಡುಪಿ - ಮಣಿಪಾಲ ಪ್ರದೇಶದಲ್ಲಿ ಸ್ಟಾರ್ಟಪ್ ಇಕೋ ಸಿಸ್ಟಮ್ ಉತ್ತೇಜಿಸುವ ನಿಟ್ಟಿನಲ್ಲಿ 2023 ಎಪ್ರಿಲ್ ನಲ್ಲಿ ಟೈ ಮಂಗಳೂರು ಚಾಪ್ಟರ್ ಅನ್ನು ಸ್ಥಾಪಿಸಲಾಗಿತ್ತು. ಕಳೆದೆರಡು ವರ್ಷಗಳ ಅವಧಿಯಲ್ಲೇ ಟೈ ಮಂಗಳೂರು ಸುಮಾರು 40 ಸ್ಟಾರ್ಟಪ್ ಉತ್ತೇಜನ ಕಾರ್ಯಕ್ರಮಗಳನ್ನು ಆಯೋಜಿಸಿದೆ. 400 ಅಧಿಕ ಉದ್ಯಮಿಗಳನ್ನು ಸಂಪರ್ಕಿಸಿದೆ. ಈ ಪ್ರದೇಶದಲ್ಲಿ ಒಟ್ಟು 20,000ಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಿರುವ 130ಕ್ಕೂ ಅಧಿಕ ಉದ್ಯಮಿಗಳು ಇದರ ಸದಸ್ಯರಾಗಿದ್ದಾರೆ ಎಂದು ರೋಹಿತ್ ಭಟ್ ವಿವರಿಸಿದರು.
15ಕ್ಕೂ ಅಧಿಕ ಏಂಜೆಲ್ ಹೂಡಿಕೆದಾರರಿರುವ ಹಾಗೂ ಒಟ್ಟು 250 ಮಿಲಿಯ ಡಾಲರಿಗೂ ಅಧಿಕ ಮೌಲ್ಯದ ಮೂರು ಪ್ರಮುಖ ಟೆಕ್ ಎಕ್ಸಿಟ್ ಆಗಿರುವ ಈ ಪ್ರದೇಶವು ಕರ್ನಾಟಕದ ಮುಂದಿನ ಸ್ಟಾರ್ಟ್ ಅಪ್ ಕೇಂದ್ರವಾಗುವ ನಿಟ್ಟಿನಲ್ಲಿ ವಿಶೇಷ ಆರಂಭಿಕ ವೇಗವನ್ನು ಪ್ರದರ್ಶಿಸಿದೆ ಎಂದು ಅವರು ಹೇಳಿದರು.
2034ರೊಳಗೆ 4,000ಕ್ಕೂ ಹೆಚ್ಚು ಸ್ಟಾರ್ಟ ಪ್ ಗಳು ಹಾಗೂ ಕನಿಷ್ಠ ಐದು ಯೂನಿಕಾರ್ನ್ ಗಳನ್ನು ಹೊಂದುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.
ಟೈಕಾನ್ ಮಂಗಳೂರು 2026 ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಶಾಂತ್ ರಾವ್ ಆರೂರ್ ಮಾತನಾಡಿ, ಔದ್ಯಮಿಕ ಮತ್ತು ಆಡಳಿತ ಕ್ಷೇತ್ರದಲ್ಲಿನ ಪ್ರಭಾವಿ ಚಿಂತಕ, ನಾಯಕರಾದ ಪ್ರಶಾಂತ್ ಪ್ರಕಾಶ್, ಮೋಹನದಾಸ ಪೈ, ಬಿ.ವಿ.ನಾಯ್ಡು ಸಂಜೀವ್ ಗುಪ್ತ ಮುಂತಾದ ಗಣ್ಯರು ಈ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಲಿದ್ದು, ಅವರಿಂದ ಪ್ರೇರಿತರಾಗಿ ಈ ಪ್ರದೇಶವನ್ನು ಈ ದಶಕದ ಒಳಗಾಗಿ ಒಂದು ಪ್ರಮುಖ ಸೃಜನಶೀಲ ಉದ್ಯಮದ ಕೇಂದ್ರವಾಗಿ ರೂಪಿಸಲು ಬಯಸುತ್ತೇವೆ. ಅದಲ್ಲದೆ ಈ ಸಿಲಿಕಾನ್ ಬೀಚ್ ಪ್ರದೇಶದಿಂದ ಆಯ್ಕೆ ಮಾಡಿದ 30ಕ್ಕೂ ಹೆಚ್ಚು ವಿಶೇಷ ಭರವಸೆಯ ಉದಯೋನ್ಮುಖ ಸ್ಟಾರ್ಟಪ್ ಗಳನ್ನು ಸ್ಟಾರ್ಟಪ್ ಪ್ರದರ್ಶನದಲ್ಲಿ ಪ್ರಸ್ತುತಪಡಿಸಲಿದ್ದೇವೆ. ಈ ಸ್ಟಾರ್ಟಪ್ ಗಳ ಪ್ರತಿಭೆ ಸಾಮರ್ಥ್ಯ ಮತ್ತು ಸೃಜನಾತ್ಮಕ ಉದ್ಯಮಶೀಲತೆಯನ್ನು ಸಂಭಾವ್ಯ ಹೂಡಿಕೆದಾರರು ಹಾಗೂ ಯಶಸ್ವಿ ಉದ್ಯಮಿಗಳು ಗಮನಿಸಲಿದ್ದಾರೆ ಎಂದು ವಿವರಿಸಿದರು.
ಸಿಲಿಕಾನ್ ವ್ಯಾಲಿಯ ಕೆಲವು ಯಶಸ್ವಿ ಉದ್ಯಮಿಗಳು, ಕಾರ್ಪೊರೇಟ್ ಅಧಿಕಾರಿಗಳು ಮತ್ತು ವೃತ್ತಿಪರರು 1992ರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಟೈ ಸಂಸ್ಥೆಯನ್ನು ಸ್ಥಾಪಿಸಿದರು. ಟೈ ಇಂದು ವಿಶ್ವದಾದ್ಯಂತ 16 ದೇಶಗಳಲ್ಲಿ ಸುಮಾರು 61 ಚಾಪ್ಟರ್ ಗಳನ್ನು ಹೊಂದಿದ್ದು 15,000ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಇದರಲ್ಲಿ ಸುಮಾರು 3,000ಕ್ಕೂ ಅಧಿಕ ಚಾರ್ಟರ್ ಸದಸ್ಯರು ಅಥವಾ ಮಾರ್ಗದರ್ಶಕರಾಗಿದ್ದಾರೆ. ಕಳೆದ 25 ವರ್ಷಗಳಲ್ಲಿ ವಿಶ್ವಾದ್ಯಂತ ಹರಡಿರುವ ಚಾಪ್ಟರ್ ಗಳ ಮೂಲಕ ಟೈ ಉದ್ಯಮಿಗಳಿಗೆ, ವೃತ್ತಿಪರರಿಗೆ, ಔದ್ಯಮಿಕ ನೇತಾರರಿಗೆ ಹಾಗೂ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಹೂಡಿಕೆದಾರರಿಗೆ ಒಂದು ಪ್ರಖರ ವೇದಿಕೆಯಾಗಿ ಪರಿಣಮಿಸಿದ್ದು ಪರಸ್ಪರ ಸಂವಹನ ಮತ್ತು ದೀರ್ಘ ಕಾಲದ ಸಂಬಂಧವನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಶಾಂತ್ ರಾವ್ ಆರೂರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯುನಿಫೈ ಸಿ ಎಕ್ಸ್ ನ ಚೀಫ್ ಪೀಪಲ್ ಸರ್ವೀಸಸ್ ಆಫೀಸರ್ ಶ್ಯಾಮ್ ಪ್ರಸಾದ್ ಹೆಬ್ಬಾರ್, ಕರುಣಾ ಇಂಫ್ರಾ ನಿರ್ದೇಶಕ ಸುದೇಶ್ ಕರುಣಾಕರನ್, ಯುನಿಕೋರ್ಟ್ ಕೋ ಫೌಂಡರ್ ಆ್ಯಂಡ್ ಸಿಇಒ ಪ್ರಶಾಂತ್ ಶೆಣೈ ಉಪಸ್ಥಿತರಿದ್ದರು.
ಯಾರೆಲ್ಲಾ ಭಾಗವಹಿಸಲಿದ್ದಾರೆ ?
*500ಕ್ಕೂ ಅಧಿಕ ಪ್ರತಿನಿಧಿಗಳು
*50ಕ್ಕೂ ಅಧಿಕ ಹೂಡಿಕೆದಾರರು
*40ಕ್ಕೂ ಅಧಿಕ ಆಹ್ವಾನಿತ ಗಣ್ಯರು
*30ಕ್ಕೂ ಅಧಿಕ ಸ್ಟಾರ್ಟಪ್ ಪ್ರದರ್ಶಕರು.