×
Ad

ಸಂಚಾರ ನಿಯಮ ಉಲ್ಲಂಘನೆಯ ಸಂದೇಶ: ಎಪಿಕೆ ಲಿಂಕ್ ಮಾಡಿ ಹಣ ಕಳಕೊಂಡ ವಾಹನದ ಮಾಲಕರು

Update: 2025-12-19 22:18 IST

ಮಂಗಳೂರು, ಡಿ.19: ವಾಹನ ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ಪಾವತಿಸುವಂತೆ ಬಂದಿದ್ದ ಸಂದೇಶವನ್ನು ನಂಬಿ ಎಪಿಕೆ ಲಿಂಕ್ ಕ್ಲಿಕ್ ಮಾಡಿದ ವಾಹನದ ಇಬ್ಬರು ಮಾಲಕರು ಹಣ ಕಳಕೊಂಡ ಘಟನೆಯ ವರದಿಯಾಗಿದೆ.

ಎರಡು ಪ್ರತ್ಯೇಕ ಪ್ರಕರಣದಲ್ಲಿ 1.43 ಲಕ್ಷ ಮತ್ತು 5.85 ಲಕ್ಷ ರೂ. ವಂಚನೆ ನಡೆದಿದ್ದು, ಈ ಬಗ್ಗೆ ಸುರತ್ಕಲ್ ಹಾಗೂ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾನು ಕೆಲಸದ ನಿಮಿತ್ತ ಗೋವಾಕ್ಕೆ ತೆರಳಿದ್ದೆ. ಡಿ.7ರಂದು ಸಂಜೆ ತನ್ನ ವಾಟ್ಸ್‌ಆ್ಯಪ್‌ಗೆ ಅಪರಿಚಿತ ಸಂಖ್ಯೆಯಿಂದ ಮೆಸೇಜ್ ಬಂದಿತ್ತು. ಅದರಲ್ಲಿ mpari.apk ,ಟ್ರಾಫಿಕ್ ವೆಹಿಕಲ್ ನೋಟಿಸ್ ಎಂದಿತ್ತು. ಎಂಪರಿ ವಾಹನ್ ಲೋಗೋ ಹಾಗೂ ಎಂ ಪರಿವಾಹನ್ ಎಂಬ ಹೆಸರು ಉಲ್ಲೇಖಿಸಲಾಗಿತ್ತು. ವಾಹನದ ಸಂಚಾರ ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ಚಲನ್ ಹಣವನ್ನು ಪಾವತಿಮಾಡಲು ಹಾಗೂ ರಸ್ತೆ ಸಂಚಾರ ನಿಯಮ ಉಲ್ಲಂಘನೆ ಪೋಟೋ ವಿಡಿಯೋ ನೋಡಲು mpari.apk ಮೆಸೇಜ್ ಡೌನಲೋಡ್ ಮಾಡಿ ತಿಳಿಸಲಾಗಿತ್ತು. ಅದನ್ನು ಡೌನ್‌ಲೋಡ್ ಮಾಡಿದಾಗ ತನ್ನ ಮೊಬೈಲ್‌ಗೆ ಹಲವು ಒಟಿಪಿಗಳು ಬಂದಿತ್ತು. ಈ ಎಲ್ಲ ಒಟಿಪಿಗಳು ಅಪರಿಚಿತ ನಂಬರ್‌ಗಳ ಹ್ಯಾಕಿಂಗ್ ಮೂಲಕ ಫಾರ್ವರ್ಡ್ ಆಗಿತ್ತು. ಈ ವೇಳೆ ತನ್ನ ವಿವಿಧ ಕ್ರೆಡಿಟ್ ಕಾರ್ಡ್‌ಗಳಿಂದ 5,85,084 ರೂ. ಹಣವನ್ನು ಶಾಪಿಂಗ್ ಹಾಗೂ ಇನ್ನಿತರ ವ್ಯವಹಾರಗಳಿಗೆ ದುರ್ಬಳಕೆ ಮಾಡಲಾಗಿದೆ. ಮಂಗಳೂರಿಗೆ ಬಂದ ಬಳಿಕ ತನ್ನ ಫೋನ್ ಹ್ಯಾಕ್ ಆಗಿರುವ ಬಗ್ಗೆ ತಿಳಿದು ಆ್ಯಪ್ ಡಿಲೀಟ್ ಮಾಡಿರುವೆ ಎಂದು ಹಣ ಕಳಕೊಂಡ ವ್ಯಕ್ತಿ ಪಾಂಡೇಶ್ವರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

*ಡಿ.4ರಂದು ತನಗೆ ಬಂದ ಸಂದೇಶದಂತೆ ಆರ್‌ಟಿಒ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿದ್ದೆ. ಬಳಿಕ ಅದೇ ದಿನ ಡಿಲೀಟ್ ಮಾಡಿದ್ದೆ. ಡಿ.16ರಂದು ತನ್ನ ಖಾತೆಯಿಂದ 99,000 ಹಾಗೂ 44,000 ರೂ. ಕಡಿತವಾಗಿದೆ. ಈ ಬಗ್ಗೆ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಅರವಿಂದ್ ಕೆ. ಮತ್ತು ಶ್ರೀರಾಮ್ ಎಂಬವರ ಯುಪಿಐ-ಐಡಿಗೆ ಹಣ ವರ್ಗಾವಣೆಯಾಗಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ ಎಂದು ಹಣ ಕಳಕೊಂಡ ವ್ಯಕ್ತಿ ಸುರತ್ಕಲ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News